ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಮೀನು ಸಂಪೂರ್ಣ ತೇವಾಂಶಗೊಂಡ ಹಿನ್ನಲೆಯಲ್ಲಿ ಬೆಳೆಗಳು ಕೊಳೆಯಲಾರಂಭಿಸಿವೆ. ಪ್ರಕೃತಿಯಿಂದಾಗಿರುವ ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಹನುಮನಾಳ ಭಾಗದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿಮಾಡಿಕೊಂಡಿದ್ದಾರೆ..!
ಮುಂಗಾರು ಸುರಿದ ಅಲ್ಪ ಸ್ವಲ್ಪ ಮಳೆಗೆ ಬಿತ್ತನೆಗೆ ಮುಂದಾಗಿದ್ದ ರೈತರಿಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಬೆಳೆಗಳು ಕೈಗೆ ಬಾರದಂತಾಗಿವೆ. ಜಿಟಿ ಜಿಟಿ ಮಳೆಗೆ ಜಮೀನು ಅತಿಯಾಗಿ ತೇವಾಂಶಗೊಂಡು ನಾನಾ ರೋಗ ಬಾಧೆಗಳಿಗೆ ತುತ್ತಾಗುತ್ತಿವೆ. ಹೆಸರು ಬೆಳೆ ಸೇರಿದಂತೆ ಹತ್ತಿ , ಬೀಜೋತ್ಪಾದನೆಯ ಹತ್ತಿ (ಕ್ರಾಸ್) , ಗೋವಿನ ಜೋಳ, ತೊಗರಿ, ಅಲಸಂದಿ, ಸಜ್ಜಿ ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೊ, ಬದನೆ, ಬೆಂಡಿ, ಮೆಣಸಿನಕಾಯಿ ಇತ್ಯಾದಿ ಬೆಳೆಗಳು ಕೊಳೆತುಹೋಗಿವೆ ಎಂದು ರೈತರು ಜಿಲ್ಲಾಧಿಕಾರಿಗಳಿಗೆ ಮನವಿಮಾಡಿಕೊಂಡಿದ್ದಾರೆ.
ಸಂಪೂರ್ಣ ಮುಂಗಾರು ಬೆಳೆ ಹಾನಿ ಅನುಭವಿಸಿದ ರೈತರಿಗೆ ಸೂಕ್ತ ರೀತಿಯಲ್ಲಿ ಎನ್.ಡಿ.ಆರ್.ಎಫ್ ನಿಯಮದಡಿ ಪರಿಹಾರ ನೀಡುವಂತೆ ರೈತರಾದ ಬಸವರಾಜ ನೀರಾವರಿ, ನಿಂಗಪ್ಪ ಬಸವಂತಪ್ಪ ಕುಂಬಾರ, ಭೀಮಪ್ಪ ವಾಲಿಕಾರ, ಪರಸಪ್ಪ ಹಂಡಿ, ದಾನಪ್ಪ ನೀರಾವರಿ, ಹನುಮಂತಪ್ಪ ಯಲ್ಲಪ್ಪ ಕುಂಬಾರ, ನಾಗಪ್ಪ ಸಾಂತಗೇರಿ, ತುಗ್ಗಲಡೋಣಿ ಗ್ರಾಮದ ಪರಸಪ್ಪ ಹುನಗುಂದ, ಸಂಗಮೇಶ ಹೊಸೂರು, ಚೆನ್ನಪ್ಪ ಹಂಡಿ, ಸಂತೋಷ ತುಂಬದ ಸೇರಿದಂತೆ ಹನುಮನಾಳ ಕಂದಾಯ ಹೋಬಳಿ ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ..!!