ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಈ ವರ್ಷದ ಮುಂಗಾರು ಫಸಲುಗಳು ಬಹುತೇಕ ಹಾಳಾಗಿ ಹೋಗಿವೆ..!
ಮಳೆಗಾಗಿಯೇ.. ದೇವರ ಸ್ಮರಣೆ, ಹೋಮ, ಹವನ, ಪೂಜೆ, ಗುರ್ಜಿ ಇತ್ಯಾದಿಗಳನ್ನು ಕೈಗೊಳ್ಳುತ್ತಿದ್ದ ರೈತರೇ.. ಇಂದು ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ವರ್ಷದ ಮುಂಗಾರು ಹಂಗಾಮು ಮಾತ್ರ ರೈತರ ಪಾಲಿಗೆ ಮಂಕಾಗಿದೆ ಎಂದರೇ ತಪ್ಪಾಗಲಾರದು.
ಮುಂಗಾರಿನ ಪ್ರಮುಖ ಬೆಳೆಗಳಾದ ಹೆಸರು, ಸಜ್ಜಿ, ಗೋವಿನ ಜೋಳ, ಸೂರ್ಯಕಾಂತಿ, ಹತ್ತಿ, ಅಲಸಂದಿ, ಎಳ್ಳು ಇತ್ಯಾದಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿಕೊಂಡಿವೆ. ಇದಕ್ಕೆಲ್ಲಾ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಪ್ರಮುಖ ಕಾರಣವಾಗಿದೆ. ಕೆಲ ಜಮೀನುಗಳಲ್ಲಿನ ಬೆಳೆಗಳು ಕೊಳೆತು ಹೋಗಿವೆ. ಜಮೀನು ಅತಿಯಾದ ತೇವಾಂಶಕ್ಕೆ ತಿರುಗಿದ ಹಿನ್ನೆಲೆಯಲ್ಲಿ ರೈತರು, ಈ ಸಧ್ಯ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದಂತಾಗಿದೆ.
ಪರಿಹಾರ ಘೋಷಣೆ ಬಾಕಿ : ನಿರಂತರವಾಗಿ ಸುರಿಯುವ ಮಳೆಯಿಂದ ಹಾನಿಗೊಳಗಾದ ರೈತರ ಪರಿಸ್ಥಿತಿ ಅರಿತಿರುವ ಜಿಲ್ಲಾಡಳಿತ ಮಾತ್ರ ಮೌನಕ್ಕೆ ಶರಣಾಗಿದೆ. ಸಾವಿರಾರು ರೂಪಾಯಿಗಳನ್ನು ಸುರಿದು ಬಿತ್ತಿದ ಬೆಳೆಗಳು ಇತ್ತ ಕೈಗೆ ಬಾರದಂತಾದರೇ.. ಅತ್ತ ಕಡೆ ಸೂಕ್ತ ಪರಿಹಾರವು ರೈತರಿಗೆ ಇಲ್ಲದಂತಾಗಿದೆ.
ಪರಿಹಾರಕ್ಕೆ ಒತ್ತಾಯ : ಕಳೆದೊಂದು ತಿಂಗಳಿಂದ ಸುರಿಯುತ್ತಿರುವ ಮಳೆಗೆ ಸೂರ್ಯಕಾಂತಿ ಬೆಳೆ ಕಳೆದುಕೊಂಡಿರುವ ಜಿಲ್ಲೆಯ ಕುಷ್ಟಗಿ ತಾಲೂಕಿನ ಕುರುಬನಾಳ ಗ್ರಾಮದ ರೈತ ಸಣ್ಣಯಮನಪ್ಪ ಪವಾಡೆಪ್ಪನವರ, ತನ್ನ ಒಂದುವರೆ ಎಕರೇ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದಿದ್ದ. ಕಟಾವಿಗೆ ಬಂದಂತಹ ಸೂರ್ಯಕಾಂತಿ ತೆನೆಗಳು ಮಳೆಗೆ ಕೊಳೆತು ಸಂಪೂರ್ಣ ಜೊಳ್ಳಾಗಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತ ಪರಿಹಾರಕ್ಕಾಗಿ ಸರ್ಕಾರಕ್ಕೆ ಅಂಗಲಾಚುತ್ತಿದ್ದಾನೆ.!!