ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಇಲ್ಲೊಂದು ರೈತ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ತಮ್ಮ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದ ‘ಪಪ್ಪಾಯಿ’ ಫಸಲಿಗೆ ಇಡೀ ಕುಟುಂಬ ಸೇರಿಕೊಂಡು ಸೀಮಂತ ಕಾರಣ ಮಾಡುವ ಮೂಲಕ ಚೊಚ್ಚಲ ಪಪ್ಪಾಯಿ ಸಮೃದ್ಧಿ ಬೆಳೆಯನ್ನು ವಿಭಿನ್ನವಾಗಿ ಅಹ್ವಾನಿಸಿಕೊಂಡಿದೆ..!
ಹಿಂದುಗಳ ಸಂಪ್ರದಾಯದಂತೆ ಚೊಚ್ಚಲ ಗರ್ಭಿಣಿ ಮಹಿಳೆಗೆ ಹೇಗೆ ಆರು ತಿಂಗಳ ತುಂಬಿದ ಬಳಿಕ ಕೈಗೊಳ್ಳುವ ಸೀಮಂತ ಕಾರಣದಂತೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಾ ಕಾಟಾಪೂರು (ಪಟ್ಟದಕಲ್ಲ ಬಳಿಯ) ಗ್ರಾಮದ ಬಸವರಾಜ ಕುಂಬಾರ ಪ್ರಗತಿಪರ ರೈತ ಕುಟುಂಬವು ಬಹಳಷ್ಟು ಆಸಕ್ತಿ ಹಾಗೂ ಶ್ರಮದಿಂದ ಬೆಳೆದಿರುವ ಪಪ್ಪಾಯಿ ‘ಮೊದಲ ಫಸಲಿಗೆ ಸೀಮಂತ’ ಕಾರ್ಯ ಕೈಗೊಂಡಿದೆ. ಹಚ್ಚ ಹಸಿರಿನಿಂದ ಕಂಗೊಳಿಸುವ ಅತಿ ಹೆಚ್ಚು ಇಳುವಳಿ ಪಡೆದಿರುವ ಪಪ್ಪಾಯಿ ಗಿಡವೊಂದಕ್ಕೆ ಮುತ್ತೈದೆಯರು ಸೇರಿಕೊಂಡು ಹಸಿರು ಸೀರೆಯ ಶೃಂಗಾರದೊಂದಿಗೆ ಮುತ್ತೈದೆಯ ಎಲ್ಲಾ ಭಾಗ್ಯಗಳನ್ನು ಕರುಣಿಸಿ, ಆರತಿವೊಂದಿಗೆ ನೈವೇದ್ಯ ಸಲ್ಲಿಸಿ, ಭೂತಾಯಿ ಮಡಿಲಿಗೆ ಇಡೀ ಕುಟುಂಬವೇ ಅಭಾರಿಯಾಗಿದೆ.
ಕುಟುಂಬದ ಸದಸ್ಯರು ಅಲ್ಲದೆ, ಅಕ್ಕಪಕ್ಕದ ಮನೆಗಳ ಕುಟುಂಬಸ್ಥರು ಸೇರಿದಂತೆ ಇಡೀ ಗ್ರಾಮವೇ ಈ ವಿನೂತನವಾದ ಭೂತಾಯಿ ಋಣ ತೀರಿಸುವ ‘ಸೀಮಂತ’ ಎಂಬ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಅಲ್ಲದೆ, ನಮ್ಮ ಜಮೀನಿನಲ್ಲಿ ಬೆಳೆದಿರುವ ಮೊದಲ ಪಪ್ಪಾಯಿ ಫಸಲು ಸಮೃದ್ಧಿಯಾಗಿ ಬೆಳೆದಿದೆ. ಅತಿ ಹೆಚ್ಚು ಇಳುವರಿ ಪಡೆಯುವ ಮೂಲಕ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಶಿಕ್ಷಕ ಹಾಗೂ ಸಿ.ಆರ್.ಪಿ ಭೀಮೇಶ ಕುಂಬಾರ..!!
ಎಲ್ಲವೂ ಮಣ್ಣಿನಿಂದಲೇ.. ಎಂಬ ನಂಬಿಕೆಯಿಂದ ಧರೆಯನ್ನು ತಾಯಿ ಸ್ವರೂಪಿ ಎಂದು ತಿಳಿದುಕೊಂಡು ‘ಭೂತಾಯಿ’ ಮಡಿಲಿಗೆ ವರ್ಷಕ್ಕೊಮ್ಮೆಯಾದರೂ ‘ಉಡಿ ತುಂಬುವ’ ಕೆಲಸವನ್ನು ಭಕ್ತಿ ಪೂರ್ವಕವಾಗಿ ಕೈಗೊಂಡಿದ್ದೇವೆ.
# # ಬಸವರಾಜ ಕುಂಬಾರ,
ಪ್ರಗತಿಪರ ರೈತ ಹಾಗೂ ಮುಖಂಡರು, ಕಾಟಾಪೂರು, ತಾ.ಬಾದಾಮಿ ಜಿ.ಬಾಗಲಕೋಟೆ.