ನಡುಗಡ್ಡೆಯಲ್ಲಿ ಸಿಲುಕಿಕೊಂಡ 5 ಜನ ರೈತರು ಸುರಕ್ಷಿತ


ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ನಗರ ಸಮೀಪದ ಕೋಳೂರು ಗ್ರಾಮದ ಬಳಿ ಹರಿದಿರುವ ಹಿರೇಹಳ್ಳದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ 5 ಜನ ರೈತರನ್ನು ರಕ್ಷಿಸುವವಲ್ಲಿ ಕೊಪ್ಪಳ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ..!

ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಮಹಾಂತೇಶ ಡೊಳ್ಳಿನ್, ರಮೇಶ ಡೊಳ್ಳಿನ್, ಬಸವರಾಜ ಗೊಂದಿಹೊಸಳ್ಳಿ, ಬಸವರಾಜ ಹುಯಿಲಗೋಳ, ಕೆಂಚಪ್ಪ ಕುರುಬರ ಎಂಬ ಐವರು ರೈತರನ್ನು ನಡುಗಡ್ಡೆಯಲ್ಲಿ ಸಿಲುಕಿಕೊಂಡವರನ್ನು ಸುರಕ್ಷಿತ ಸ್ಥಳಕ್ಕೆ ಆಧುನಿಕ ದೋಣಿ ಮೂಲಕ ತಲುಪಿಸುವಲ್ಲಿ ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ಜರುಗಿಲ್ಲ.

ಕಳೆದ ನಾಲ್ಕೈದು ದಿನಗಳಿಂದ ಹರಿಯುತ್ತಿರುವ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ, ಅಳಿದುಳಿದ ಮೋಟಾರು ಪೈಪಗಳನ್ನು ರಕ್ಷಿಸಲು ಮುಂದಾಗಿದ್ದ ರೈತರಿಗೆ ಹಿರೇಹಳ್ಳ ಜಲಾಶಯದಿಂದ ಹೆಚ್ಚುವರಿ ನೀರನ್ನು ಏಕಾಏಕಿ ಹರಿಬಿಟ್ಟಿರುವ ಕಾರಣದಿಂದ ಐವರು ಜನ ರೈತರು ನಡುಗಡ್ಡೆಯಲ್ಲಿ ಸಿಲುಕಿಕೊಳ್ಳಲು ಪ್ರಮುಖ ಕಾರಣವೆನ್ನುತ್ತಾರೆ ಗ್ರಾಮಸ್ಥರು. ಘಟನೆಗೆ ಹಿರೇಹಳ್ಳ ಜಲಾಶಯ ಮೇಲ್ಭಾಗದಲ್ಲಿ ವಿಪರಿತ ಸುರಿಯುತ್ತಿರುವ ಮಳೆಯಿಂದ ಜಲಾಶಯ ಭರ್ತಿಯಾಗಿ ಹೊರಬಿಡುತ್ತಿರುವು ನೀರಿನಿಂದ ರೈತರ ಸ್ಥಳವು ನಡುಗಡ್ಡೆಯಾಗಿ ನಿರ್ಮಾಣವಾಗಿದೆ. ಐದು ಜನ ರೈತರ ರಕ್ಷಣೆಗೆ ಅಗ್ನಿಶಾಮಕ ತಂಡ ಸೇರಿದಂತೆ ಪೊಲೀಸರ ಸಮರೋಪ ಹಾದಿಯಲ್ಲಿನ ಪ್ರಯತ್ನ ಯಶಸ್ವಿಗೆ ಕಾರಣವಾಗಿದೆ..!!