ಚೆಂಡು ಹೂ ಬೆಳೆ..! ಹಣದ ಸುರಿ ಮಳೆ..!!

 


ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಭಾಗದಲ್ಲಿ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಚೆಂಡು ಹೂವಿನ ಬೆಳೆಯನ್ನು ಎತೆಚ್ಛವಾಗಿ ಬೆಳೆಯಲಾಗಿದೆ..!

ಹನುಮನಾಳ ಸೇರಿದಂತೆ, ಗುಡ್ಡದ ದೇವಲಾಪೂರು, ಜಾಗೀರಗುಡದೂರು, ರಂಗಾಪೂರು, ಬಿಳೇಕಲ್, ಕುರುಮನಾಳ, ನಿಲೋಗಲ್, ಪಟ್ಟಲಚಿಂತಿ, ಮಾಲಗಿತ್ತಿ, ತುಗ್ಗಲಡೋಣಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಸುಮಾರು 800 ರಿಂದ 1000 ಸಾವಿರ ಎಕರೆ ಪ್ರದೇಶದಲ್ಲಿ ಚೆಂಡು ಹೂವಿನ ಬೆಳೆಯನ್ನು ಬೆಳೆಯಲಾಗಿದೆ. ಖಾಸಗಿ ಕಂಪನಿವೊಂದಕ್ಕೆ ಕೆ.ಜಿ ಗೆ 10 ರೂಪಾಯಿಗಳ ದರದಲ್ಲಿ ಮಾರಾಟವಾಗುವ ಚೆಂಡು ಹೂ ಮಾತ್ರ ಈ ಭಾಗದ ರೈತರ ಆದಾಯದ ಬೆಳೆಯಾಗಿ ಹೊರ ಹೊಮ್ಮಿದೆ. ತುಮಕೂರಿನ ಎವಿಟಿ ಗ್ರೂಪ್ ಎಂಬ ಖಾಸಗಿ ಕಂಪನಿ ನೀಡಿದ ಚೆಂಡು ಹೂವಿನ ಬೀಜವನ್ನು ರೈತರು ಮೊದಲು ಮಡಿಯಲ್ಲಿ ಸಸಿ ಮಾಡಿಕೊಂಡು ಬಳಿಕ ನಾಟಿ ಮಾಡಿ, ತಿಂಗಳೊಳಗಾಗಿ ಸಸಿಗಳ ಚೆಂಡು ‘ಚಿವುಟುವ ಪದ್ಧತಿ’ ಮೂಲಕ ಅಪಾರ ಪ್ರಮಾದಲ್ಲಿ ಹೂ ಇಳುವರಿ ಪಡೆದು, ರೈತರು ತಮ್ಮ ಆದಾಯ ವೃದ್ಧಿಸಿಕೊಂಡಿದ್ದಾರೆ. ಎಕರೆಗೆ 60 ರಿಂದ 80 ಸಾವಿರ ರೂಪಾಯಿಗಳವರೆಗೆ ಆದಾಯ ಪಡೆಯುವಲ್ಲಿ ಕೂಡಾ ಯಶಸ್ವಿಯಾಗಿದ್ದಾರೆ. ರೈತರು ಇಲ್ಲಿಯವರೆಗೂ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು, ಕೈ ಸುಟ್ಟುಕೊಂಡಿದ್ದವರಿಗೆ ‘ಚೆಂಡು ಹೂ’ ಆದಾಯದ (ವಾಣಿಜ್ಯ) ಬೆಳೆಯಾಗಿದೆ. ಜಮೀನು ಹದ ಸೇರಿದಂತೆ, ಕಳೆ, ಕ್ರಿಮಿನಾಶಕ ಹಾಗೂ ಕೂಲಿ ಇತ್ಯಾದಿಗಳ ವೆಚ್ಚಗಳನ್ನು ತೆಗೆಯಲಾಗಿ ಎಕರೆಗೆ ತಲಾ 50 ಸಾವಿರ ರೂಪಾಯಿಗಳ ನಿವ್ವಳ ಆದಾಯ ಗಳಿಸುವಲ್ಲಿ ರೈತರು ಯಶಸ್ವಿಯಾಗಿದ್ದಾರೆ.

ಅತ್ಯಧಿಕ ಇಳುವರಿಗೆ ಮಳೆ ಕಾರಣ : ಚೆಂಡು ಹೂವಿನ ಕೃಷಿಯಲ್ಲಿ ಅತ್ಯಧಿಕ ಇಳುವರಿ ಪಡೆಯುವುದಕ್ಕೆ ಸತತವಾಗಿ ಸುರಿಯುತ್ತಿರುವ ಮಳೆ ಪ್ರಮುಖ ಕಾರಣವಾಗಿದೆ. (ನೀರಾವರಿ ಬೆಳೆಗಳನ್ನು ಹೊರತು ಪಡಿಸಿ) ಯಾವ ಬೆಳೆಗಳಿಗೂ ಬೇಡವಾಗಿರುವ ನಿರಂತರವಾಗಿ ಸುರಿಯುತ್ತಿರುವ ಈ ಮಳೆ ಮಾತ್ರ ಚೆಂಡು ಹೂವಿಗೆ ಪಂಚಾಮೃತ ಅಂದರೆ, ತಪ್ಪಾಗಲಾರದು. ಅತಿವೃಷ್ಠಿ ಮತ್ತು ಅನಾವೃಷ್ಠಿ ಮಧ್ಯೆ ಈ ಭಾಗದ ರೈತರನ್ನು ಪುಷ್ಪ ಕೃಷಿ ಕೈ ಹಿಡಿದಿರುವುದಂತು ಸತ್ಯ..!!

ಚಲನಚಿತ್ರ ಗೀತೆಯಂತೆ “ಚೆಂಡು ಹೂವು ಚೆಲುವೆಲ್ಲಾ ನಂದೇಂದಿತು ಎಂದರೇ..! ಕಷ್ಟಪಟ್ಟು ಬೆಳೆದ ರೈತರು ಮಾತ್ರ ನಾನೇ ದೊರೆ” ಎನ್ನುತ್ತಿದ್ದಾರೆ..!!