ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : 2022 ನೇ ಸಾಲಿನ ರಾಜ್ಯಮಟ್ಟದ ‘ಉತ್ತಮ ಶಿಕ್ಷಕಿ ಪ್ರಶಸ್ತಿ’ ಪಡೆದಿರುವ ‘ವಿದ್ಯಾ ಕಂಪಾಪುರಮಠ’ ಅವರು ಈ ಸಧ್ಯ ಸೇವೆ ಸಲ್ಲಿಸುತ್ತಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದು..!
ರಾಜ್ಯಮಟ್ಟದ ‘ಉತ್ತಮ ಶಿಕ್ಷಕಿ’ ಪ್ರಶಸ್ತಿ ತಮಗೆ ದೊರಕಿರುವಷ್ಟು ಹಾಗೂ ತಮ್ಮ ಶಾಲೆಯೇ ಆ ದೊಡ್ಡ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವಷ್ಟು ಸಂತೋಷ ಸಂಭ್ರಮವು ಈ ಶಾಲೆಯ ಶಿಕ್ಷಕರು ಸೇರಿದಂತೆ ಇಲ್ಲಿನ ಮುದ್ದು ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ. ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿರುವ ಶಾಲೆಯ ಹಿರಿಯ ಶಿಕ್ಷಕಿ ವಿದ್ಯಾ ಕಂಪಾಪೂರಮಠ ಅವರ ಕುರಿತು ‘ಕೃಷಿ ಪ್ರಿಯ’ ಪತ್ರಿಕೆಯ ಒಂದು ಸಣ್ಣ ಸಂದರ್ಶನದ ಜಲಕ ನಿಮಗಾಗಿ ಇಲ್ಲಿದೆ ನೋಡಿ…
ಕುಷ್ಟಗಿ ಪಟ್ಟಣಕ್ಕೆ ಅಣತಿ ದೂರದಲ್ಲಿರುವ ನೆರೆಬೆಂಚಿ ಎಂಬ ಸಣ್ಣ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯು ತನ್ನದೇ ಆದ ಗೌರವವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಏಕಂದರೆ… ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿದ್ದ ಶಾಲೆಯು ಕೇವಲ ಜಿಲ್ಲೆಗೆ ಅಷ್ಟೇ ಅಲ್ಲ, ರಾಜ್ಯ ಮಟ್ಟದಲ್ಲಿ ನೆರೆಬೆಂಚಿ ಶಾಲೆಯ ಹೆಸರು ಮುನ್ನಲೆಗೆ ಬಂದಿದೆ ಎಂದರೆ ತಪ್ಪಾಗಲಾರದು. ಇದಕ್ಕೆಲ್ಲಾ ಶಾಲೆಯ ಹಿರಿಯ ಶಿಕ್ಷಕಿ ವಿದ್ಯಾ ಕಂಪಾಪೂರಮಠ ಅವರು ಕಾರಣವಾಗಿದ್ದಾರೆ. ಇವರ ಪಾಠ ಬೋಧನೆಯ ಕ್ರಿಯಾಶೀಲತೆ ಜೊತೆಗೆ ಮಕ್ಕಳ ಮೇಲಿನ ಅತಿಯಾದ ಪ್ರೀತಿ ಕಾಳಜಿ ಕೂಡಾ ಹೌದು. ಇತರ ಶಿಕ್ಷಕ ಶಿಕ್ಷಕಿಯರಂತೆ ವಿದ್ಯಾ ಕಂಪಾಪೂರಮಠ ಅವರು ಬೋಧನೆಗೆ ಮುಂದಾದರೂ ಕೂಡಾ ಇವರ ಪಾಠ ಬೋಧನೆ ಜೊತೆಗೆ ಮಕ್ಕಳನ್ನು ಏಕಾಗ್ರತೆ ಕಡೆಗೆ ಕರೆ ತರುವಲ್ಲಿ ಇವರು ನಿಶ್ಚಿಮರು. ವಸ್ತು ನಿಷ್ಠ ಪಾಠ ಬೋಧನೆ ಜೊತೆಗೆ ಎಲ್ಲ ಮಕ್ಕಳು ಕಲಿಕೆಯಲ್ಲಿ ಭಾಗವಹಿಸುವಂತೆ ಮಾಡುವ ಶಿಕ್ಷಕಿಯಲ್ಲಿನ ಕಲೆ ಮಾತ್ರ ಮೆಚ್ಚುವಂತದ್ದು. ಆಟದ ಜೊತಗೆ ಸಂಗೀತ, ನೃತ್ಯ, ಹಾವ, ಭಾವನೆಗಳ ಮೂಲಕ ಕೈಗೊಳ್ಳುವ ಕಲಿಕಾ ಆಕರ್ಷಣೆಯ ವಿಭಿನ್ನ ಬೋಧನೆ ಪದ್ಧತಿಗೆ ಇಲ್ಲಿನ ವಿದ್ಯಾರ್ಥಿಗಳು ಫಿದಾ ಆಗಿದ್ದಾರೆ. ಶಾಲೆಯ ದಿನಚರಿ ಆರಂಭವಾಗುವ ಪ್ರಾರ್ಥನೆಯಿಂದ ಹಿಡಿದು, ಪ್ರತಿ ಮಗುವಿನ ಶಿಸ್ತಿನ ಕಡೆಗೆ ಗಮನ ಹರಿಸುವುದು ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಆಸಕ್ತಿ ತೊರಿಸುವುದು ಅಂದರೆ ವಿದ್ಯಾ ಮೇಡಂ ಅವರಿಗೆ ಪಂಚ ಪ್ರಾಣ. ಅದರ ಅಷ್ಟೇ ಪ್ರೀತಿ. ವಿದ್ಯಾ ಕಂಪಾಪೂರಮಠ ಶಿಕ್ಷಕಿ ಅಂದರೆ ಇಲ್ಲಿನ ಸಹೋದ್ಯೋಗಿಗಳಿಗೆ ಬಹಳಷ್ಟು ಪ್ರೀತಿ ಜೊತೆಗೆ ಆದರ್ಶ ಪ್ರಾಯರಾಗಿದ್ದಾರೆ. ಶಾಲೆಯ ಮುಖ್ಯ ಗುರುಮಾತೆ ನೀಲಮ್ಮ ಮುಧೋಳ ಅವರಿಂದ ಹಿಡಿದು, ದೈಹಿಕ ಶಿಕ್ಷಣ ಶಿಕ್ಷಕ ಹೊನ್ನಪ್ಪ ಡೊಳ್ಳಿನ, ಶಿಕ್ಷಕ ಸಿದ್ಧನಗೌಡ ಮಾಲಿಪಾಟೀಲ, ಶಿಕ್ಷಕಿಯರಾದ ಈರಮ್ಮ ಹಿರೇಮಠ, ಸುವರ್ಣ ಪಾಟೀಲ, ಗೀತಾ ಬಸರಕೋಡ, ಉಮಾ ಮಗಣ್ಣಿ, ಸವಿತಾ ಕೆ ಹಾಗೂ ಜೋತಿಶ್ರೀ ಇವರೆಲ್ಲರೂ ವಿದ್ಯಾ ಮೇಡಂ ಅವರ ಕಲಿಕಾ ಪದ್ಧತಿ ನಮಗೆ ಮಾದರಿಯಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಕಿರು ಪರಿಚಯ : ಶಿಕ್ಷಕಿ ವಿದ್ಯಾ ಅಡವಯ್ಯ ಕಂಪಾಪೂರಮಠ ಅವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದವರು. ಎಂ.ಎ, ಬಿ.ಈಡಿ ಪದವೀಧರರಾದ ಇವರು ಕನ್ನಡ ಹಾಗೂ ಸಮಾಜ ಶಾಸ್ತ್ರ ಬೋಧನೆಯಲ್ಲಿ ನಿಶ್ಚಿಮರು. 17-02-1997 ರಂದು ಸರಕಾರಿ ಸೇವೆಗೆ ಸೇರಿದ ಇವರು, ಬೋಧನೆ ಜೊತೆಗೆ ಅಪಾರ ಜನಮನ್ನಣೆ ಗಳಿಸಿದವರು.
ಪ್ರಶಸ್ತಿ ಗರಿಗಳು : 25 ವರ್ಷಗಳ ಅವಿರತ ಸೇವೆಯಲ್ಲಿರುವ ವಿದ್ಯಾ ಕಂಪಾಪೂರಮಠ ಅವರಿಗೆ ಇಲಾಖೆಯಲ್ಲಿನ ಎಲ್ಲಾ ತರಬೇತಿಯಲ್ಲಿ ಇವರು ಪ್ರಾವೀಣ್ಯತೆ ಪಡೆದವರು. ಕಸದಿಂದ ರಸವನ್ನು ಹೇಗೆ ಪಡೆಯಬೇಕು ಎಂಬ ಮಹತ್ವವನ್ನು ಸಾರಿದವರು. ಸರಳ ಬೋಧನೆ ಜೊತೆಗೆ ಮಕ್ಕಳಿಗೆ ಪಾಠ ಬೇಗ ಅರ್ಥವಾಗಲಿ ಎಂಬ ಸದುದ್ದೇಶದಿಂದ ತಂತ್ರಜ್ಞಾನ ಅಳವಡಿಕೆಗಳೊಂದಿಗೆ ಸಿಡಿ ಮೂಲಕ ತಮ್ಮ ಪಾಠ ಪ್ರಸ್ತುತ ಪಡಿಸಿರುವುದು ಇವರ ಸಾಕಷ್ಟು ಸಾಧನೆಗಳಲ್ಲಿ ಇದೊಂದು ಪ್ರಮುಖವಾದದ್ದು.
ವಿದ್ಯಾ ಅವರ ಮನದಾಳದ ಮಾತಗಳು : ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ಸಂಗತಿ. ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿಗಳು ಹೆಚ್ಚಾಗಿವೆ. ಈ ಪ್ರಶಸ್ತಿ ಶ್ರೇಯಸ್ಸು ನನ್ನ ಅಸಂಖ್ಯಾತ ಮುದ್ದು ವಿದ್ಯಾರ್ಥಿಗಳಿಗೆ ಸಲ್ಲುತ್ತದೆ. ಹುದ್ದೆ ಅಲಂಕರಿಸಿದ ಮೇಲೆ ಎಲ್ಲಾ ಶಿಕ್ಷಕ ಶಿಕ್ಷಕಿಯರು ವಿಭಿನ್ನ ಕ್ರಿಯಾಶೀಲರಾಗಬೇಕು. ನಾವು ಮಕ್ಕಳಂತೆ ನಿತ್ಯ ಕಲಿಕೆಯ ಜೊತೆಗೆ ಸೇವಾ ಸಮರ್ಪಣಾ ಭಾವನೆಗಳನ್ನು ಹೊಂದಿರಬೇಕು. ನಮ್ಮ ಮಕ್ಕಳಂತೆ ಶಾಲೆಯ ಎಲ್ಲಾ ಮಕ್ಕಳನ್ನು ಕಂಡಾಗ ಮಾತ್ರ ‘ಗುರು’ ಸ್ಥಾನಕ್ಕೆ ಅರ್ಥ ಬರುತ್ತದೆ ಎಂಬುದು ವಿದ್ಯಾ ಕಂಪಾಪೂರಮಠ ಅವರ ಮನದಾಳದ ಮಾತಾಗಿದೆ. ವಿದ್ಯಾ ಮೇಡಂ ಅವರ ವೃತ್ತಿ ಬದುಕಿನಲ್ಲಿ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳ ಜೊತೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸುವಂತಾಗಲಿ ಎಂಬುದು ನಮ್ಮೊದೊಂದು ಆಶಯ..!!