ಕೊಪ್ಪಳ ಜಿಲ್ಲೆಗೆ 5 ಪಿ ಯು ಕಾಲೇಜುಗಳು

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಜ್ಯದಲ್ಲಿ ನೂತನವಾಗಿ ಜಾರಿಗೆ ಬಂದಿರುವ 46 ಪದವಿ ಪೂರ್ವ ಕಾಲೇಜುಗಳಲ್ಲಿ ಕೊಪ್ಪಳ ಜಿಲ್ಲೆಗೆ 5 ಕಾಲೇಜುಗಳ ಸ್ಥಾಪನೆಗೆ ಒಪ್ಪಿಗೆ ನೀಡಿರುವುದು ಸಂತೋಷದ ಸಂಗತಿ..!

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಸ್ಥಳವಾದ ಆನೆಗೊಂದಿ ಹಾಗೂ ವೆಂಕಟಗಿರಿ, ಕುಷ್ಟಗಿ ತಾಲೂಕಿನ ಸಂಗನಾಳ ಹಾಗೂ ನಿಲೋಗಲ್ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮಗಳಲ್ಲಿ ನೂತನವಾಗಿ ಪದವಿ ಪೂರ್ವ ಕಾಲೇಜ್ ಸ್ಥಾಪನೆಗೆ ಸರಕಾರ ಅಸ್ತು ಎಂದಿದೆ. 41 ಸರಕಾರಿ ಪಿಯು ಕಾಲೇಜುಗಳನ್ನು ಹೊಂದಿದ ಜಿಲ್ಲೆಯಲ್ಲಿ 5 ನೂತನ ಸರಕಾರಿ ಪಿಯು ಕಾಲೇಜುಗಳು ಸೇರ್ಪಡೆಯಾದವು. ಮೊರಾರ್ಜಿ ದೇಸಾಯಿ ವಸತಿ 07 ಕಾಲೇಜುಗಳು, ಅನುದಾನಿತ 09 ಕಾಲೇಜುಗಳು, ಅನುದಾನ ರಹಿತ 49 ಕಾಲೇಜುಗಳು ಸೇರಿದಂತೆ (ಸರಕಾರಿ 46) ಒಟ್ಟು 111 ಪದವಿ ಪೂರ್ವ ಕಾಲೇಜುಗಳನ್ನು ಕೊಪ್ಪಳ ಜಿಲ್ಲೆ ಹೊಂದಿದಂತಾಗಿದೆ..!!

ಹೋರಾಟದ ಫಲ : ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಸ್ಥಾಪನೆಯಾಗಲೇಬೇಕು ಎಂಬ ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಗ್ರಾಮಸ್ಥರು ಇತ್ತೀಚಿಗೆ ಪ್ರತಿಭಟಿಸಿದ್ದರು. ಕೊಪ್ಪಳ ಜಿಲ್ಲೆ ಹಾಗೂ ಗುಲಬರ್ಗಾ ವಿಭಾಗದ (ಹೈದ್ರಾಬಾದ್ ಕರ್ನಾಟಕದ) ಗಡಿ ನಿಲೋಗಲ್ ಗ್ರಾಮಕ್ಕೆ ಪಿಯು ಕಾಲೇಜ್ ನೀಡಿರುವುದಕ್ಕೆ ಗ್ರಾಮಸ್ಥರು ಸರಕಾರವನ್ನು ಅಭಿನಂದಿಸಿದ್ದಾರೆ.