ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ‘ಹತ್ತಿ ಬೆಳೆಗೆ ಹತ್ತು ಕುತ್ತು’ ಬರುವುದು ರೈತರ ವಾಡಿಕೆ ಆಗಿತ್ತು. ಆದರೆ, ಆ ವಾಡಿಕೆ ಈ ವರ್ಷ ಸತ್ಯವಾಗಿದೆ..!
ಈ ವರ್ಷದ ಮುಂಗಾರು ಹಂಗಾಮು ಸಂಪೂರ್ಣ ಹಾಳಾಗಿ ಹೋಗಿದೆ. ಅವಿರತವಾಗಿ ಸುರಿದ ಮಳೆ ಮಾತ್ರ ಕೃಷಿಕರ ಬದುಕನ್ನು ನುಂಗಿ ಹಾಕಿದೆ. ಅದರಲ್ಲಿ, ಅಷ್ಟಿಷ್ಟು ಆದರೂ ಬೆಳೆ ಕೈಗೆ ಬರಬಹುದು ಎಂಬ ಅಚಲ ನಂಬಿಕೆ ಇಟ್ಟುಕೊಂಡ ರೈತರಿಗೆ ಹತ್ತಿ ಬೆಳೆ ಸಂಪೂರ್ಣ ಕೈಕೊಟ್ಟಿದೆ. ಬೀಜ ನಾಟಿ ಸಮಯದಲ್ಲಿಯೇ ಸುರಿಯಲಾರಂಭಿಸಿದ ಮಳೆ (ಅತಿವೃಷ್ಠಿ) ನಾಟಿಗಳು ಜಮೀನು ಬಿಟ್ಟು ಮೇಲೆ ಬರುವ ಸುಮಾರಿಗಾಗಲೇ ನೀರಿನಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿಕೊಂಡವು. ಈ ಸಮಯದಲ್ಲಿ ವಿಶೇಷವಾಗಿ ಕ್ರಾಸ್ ಹತ್ತಿ ಬೆಳೆಗಾರರು ಪಟ್ಟ ಕಷ್ಟ ಅಷ್ಟಿಷ್ಟು ಅಲ್ಲ. ಅದನ್ನು ಹೇಳತೀರದಂತಾಗಿದೆ. ತುಂತುರು ಮಳೆಯಲ್ಲಿಯೇ ಜೀವ ಕೈಯಲ್ಲಿ ಹಿಡಿದುಕೊಂಡು ಕ್ರಾಸ್ ಮುಗಿಸಿದ ಕೃಷಿಕನಿಗೆ ಇನ್ನೇನು ಕೇಲವು ದಿನಗಳಲ್ಲಿ ಹತ್ತಿ ಬಿಡಿಸುವ ಚಿಂತೆಯಲ್ಲಿರುವಾಗ ಮತ್ತೆ ಅದೇ ಮಳೆ ಕಾಟದಿಂದ ಸಂಪೂರ್ಣ ಗಿಡಗಳಲ್ಲಿ ಹತ್ತಿ ಕೊಳೆತು ಹೋಗಿತು. ಇದರ ಮಧ್ಯದಲ್ಲಿಯೇ ಕಳಪೆ ಬೀಜ ನಾಟಿ, ಅನ್ ಕ್ರಾಸ್ ಎಂಬ ಪೆಡಂಭೂತ (ಕಿತ್ತು ಹಾಕುವುದು), ಸೊರಗು ರೋಗ, ಕಾಯಿ ಕೊರಕ, ವಿವಿಧ ತರಹದ ಕೀಟಗಳ ಬಾಧೆ, ಎಲೆ ಮುಟ್ಟು ರೋಗ, ಬಿಳಿ ಅಂಟು ರೋಗ, ತಾಮ್ರ ರೋಗ ಸೇರಿದಂತೆ ಇನ್ನೂ ಅನೇಕ ಹವಾಮಾನ ವೈಪರೀತ್ಯಗಳಿಂದ ರೋಗಗಳು ಬೆಳೆಯನ್ನು ಎಡತಾಗಿದ್ದಾಗಿದೆ.
ಜಮೀನು ಹದದಿಂದ ಹಿಡಿದು, ಬೀಜ ನಾಟಿ, ಕಳೆ, ಕೂಲಿ, ಕ್ರಾಸ್ ಕರ್ಚು, ರಸಗೊಬ್ಬರ, ಕ್ರಿಮಿನಾಶಕ, ಗಳೆ ಇತ್ಯಾದಿಗಳ ಕರ್ಚುಗಳ ಹೋರಾಟದ ಮಧ್ಯೆ ಹತ್ತಿ ಬೆಳೆಗೆ ಹತ್ತು ಕುತ್ತು ಇವೆ ಎಂಬ ಸತ್ಯ ಮಾತ್ರ ಈ ವರ್ಷ ಸಾಬೀತಾಯಿತು ಅಲ್ಲವೇ..!?
ಪರಿಹಾರ ನೀಡಲೇಬೇಕು : ಹತ್ತಿ ಬೆಳೆಯಿಂದ ಹಿಡಿದು, ಇನ್ನೂಳಿದ ಬೆಳೆಗಳಿಗೆ ಪರಿಹಾರವನ್ನು ಸರಕಾರ ಕೂಡಲೇ ಘೋಷಿಸಬೇಕು ಎಂಬ ಕೂಗು ಕೃಷಿಕರಿಂದ ಕೇಳಿ ಬರುತ್ತಿದೆ. ಇಲ್ಲಿಯವರೆಗೂ ಲಾಭವನ್ನು ಪಡೆದಿರುವ ಕ್ರಾಸ್ ಹತ್ತಿ ಬೀಜ ನೀಡುವ ಖಾಸಗಿ ಕಂಪನಿಗಳು ಪರಿಹಾರ ರೂಪದಲ್ಲಿ ದರ ಹೆಚ್ಚಿಸಬೇಕು ಇಲ್ಲವೇ ದರದ ಜೊತೆಗೆ ಕನಿಷ್ಠ ಪರಿಹಾರದ ಇಡಿಗಂಟು ನೀಡಬೇಕೆಂಬ ಬಲವಾದ ರೈತರ ಬೇಡಿಕೆಯ ಕೂಗು ಕೇಳಿ ಬರುತ್ತಿದೆ. ಅಲ್ಲದೆ, ಖಾಸಗಿ ಕಂಪನಿಗಳು ಕೃಷಿ ಚಟುವಟಿಕೆಗಳಿಗೆ ರೈತರಿಗೆ ನೀಡಿರುವ ಮುಂಗಡ ಹಣಕ್ಕೆ ‘ಬಡ್ಡಿ’ ಹಾಕಬಾರದು ಎಂಬ ಒತ್ತಾಯವಂತು ಬಲವಾಗಿದೆ..!!