ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕೊಪ್ಪಳ ಜಿಲ್ಲೆಗೊಂದು ಐತಿಹಾಸಿಕ ಮೈಲುಗಲ್ಲು ಹಾಕಿದ ಸುದ್ದಿ ಇದು..!
ಹೌದು, ಮೈಸೂರು ದಸರಾ ಕ್ರೀಡಾಕೂಟಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಕೊಪ್ಪಳ ಜಿಲ್ಲೆ ಅಥವಾ ಅಖಂಡ ರಾಯಚೂರು ಜಿಲ್ಲೆಯ ಮಹಿಳೆಯರ ತಂಡ ‘ವಾಲಿಬಾಲ್’ ಪಂದ್ಯಾವಳಿಯಲ್ಲಿ ಕಪ್ ಪಡೆದುಕೊಂಡಿದ್ದಿಲ್ಲ. ಆದರೆ, ಅ.1 ರಂದು ಜರುಗಿದ ರೋಚಕ ಪಂದ್ಯಗಳ ಹಣಾಹಣಿಯಲ್ಲಿ ಕೊಪ್ಪಳ ತಂಡದ ಮಹಿಳೆಯರು ಈ ವರ್ಷದ ಸಿಎಂ ದಸರಾ ವಾಲಿಬಾಲ್ ಕಪ್ ಮೂಡಿಗೇರಿಸಿಕೊಂಡಿರುವುದು ಅತ್ಯುತ್ತಮ ಸಾಧನೆಗಳಲ್ಲೊಂದು. ಗುಲಬರ್ಗಾ ವಿಭಾಗದಿಂದ ಸ್ಪರ್ಧೆಯೊಡ್ಡಿದ ಮಹಿಳಾ ತಂಡದಲ್ಲಿ ಕೊಪ್ಪಳದ ಬಹುತೇಕ ಬಾಲಕಿಯರು ಪಾರುಪತ್ಯೆ ಮೆರೆದಿರುವುದು ಒಂದು ಇತಿಹಾಸ. ತಂಡದಲ್ಲಿ ಪ್ರಮುಖವಾಗಿ ಹುಲಿಗೇಮ್ಮ, ಗಾಯತ್ರಿ, ಸಂಗಮ್ಮ, ರೇವತಿ, ಸುರೇಖಾ ಹಾಗೂ ಸಂಗೀತಾ ಅವರು ವಾಲಿಬಾಲ್ ಮೇಲಿನ ಕೈಚಳಕ ಮಾತ್ರ ಅದ್ಭುತ.
ರೋಚಕ ಜಯ : ಆರಂಭ ಪಂದ್ಯವನ್ನು ಬೆಂಗಳೂರು ಸಿಟಿ ತಂಡದ ಮೇಲೆ 3-0 ಸೆಟ್ ನಲ್ಲಿ ಜಯ ಆರಂಭಿಸಿತು. ಮೈಸೂರು ವಿಭಾಗದ ತಂಡದೊಂದಿಗೆ 5-3 ಸೆಟ್, ಬೆಳಗಾವಿ ವಿಭಾಗದೊಂದಿಗೆ 3-0 ಸೆಟ್, ಬೆಂಗಳೂರು ಗ್ರಾಮಾಂತರ ವಿಭಾಗದ ತಂಡದ ಫೈನಲ್ ಪಂದ್ಯಾವಳಿಯಲ್ಲಿ 3-0 ಜಯ ಸಾಧಿಸುವಲ್ಲಿ ಕೊಪ್ಪಳ (ಗುಲಬರ್ಗಾ ವಿಭಾಗ) ತಂಡವು ಯಶಸ್ವಿಯಾಗುವ ಮೂಲಕ ಈ ವರ್ಷದ ದಸರಾ ಮಹಿಳೆಯರ ವಾಲಿಬಾಲ್ ಕಪ್ ತನ್ನದಾಗಿಸಿಕೊಂಡಿತು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಗ್ರೇಸಿಯಾ ಸೇರಿದಂತೆ ಇಲಾಖೆ ವಾಲಿಬಾಲ್ ತರಬೇತಿದಾರರಾದ ಸುರೇಶ ಯಾದವ, ಕಮಲ್ ಸಿಂಗ್ ಬಿಸ್ತಿ, ಖೋ-ಖೋ ಜಿಲ್ಲಾ ತರಬೇತಿದಾರ ಯತಿರಾಜು, ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಮತ್ತು ಅಪಾರ ಕ್ರೀಡಾಭಿಮಾನಿಗಳು ವಾಲಿಬಾಲ್ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.
ಸುರೇಶ ಯಾದವ ಪರಿಶ್ರಮದ ಫಲ : ಸತತ 15 ವರ್ಷಗಳ ಕಾಲ ವಾಲಿಬಾಲ್ ಕ್ರೀಡೆಯ ಮೇಲೆ ಹಿಡಿತ ಹೊಂದಿದ ವಾಲಿಬಾಲ್ ತರಬೇತಿದಾರ ಸುರೇಶ ಯಾದವ (ಸುರಿ ಹುಲಿಗಿ) ಅವರ ಪರಿಶ್ರಮದ ಫಲವಾಗಿ ಇಂದು ಮಹಿಳೆಯರ ತಂಡವು ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕೊಪ್ಪಳ ತಂಡ ಯಶಸ್ವಿ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಬಹುದಾಗಿದೆ. ಕ್ರೀಡಾ ವಸತಿ ನಿಲಯದ ಆರಂಭದ ಕಾಲದಲ್ಲಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳನ್ನು ಕ್ರೀಡಾ ಶಾಲೆಗೆ ಸೇರ್ಪಡೆಗಾಗಿ ಪಟ್ಟ ಶ್ರಮ ಅಷ್ಟಿಷ್ಟು ಅಲ್ಲ. ಹಲವು ಅಡಚಣೆಗಳೊಂದಿಗೆ ತರಬೇತಿ ನೀಡಿದ ತರಬೇತಿದಾರ ಸುರೇಶ ಅವರ ಶ್ರಮಕ್ಕೆ ಫಲ ದೊರೆದಂತಾಗಿದೆ..!!