ಗಾಂಧಿ ಟೋಪಿ

 


ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಟೋಪಿಯನ್ನು ಒಮ್ಮೆಯೂ ಹಾಕದಿದ್ದರೂ ಕರ್ನಾಟಕ ಸೇರಿದಂತೆ ದೇಶದಲ್ಲಿ ‘ಗಾಂಧಿ ಟೋಪಿ’ ಎಂತಲೇ ಫೇಮಸ್..!

ಅದರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ‘ಗಾಂಧಿ ಟೋಪಿ’ ಕೇವಲ ಒಂದು ಉಡುಗೊರೆ ಆಗಿರದೇ, ಉಡುಗೆ ಸಂಪ್ರದಾಯದ ಒಂದು ಭಾಗವಾಗಿದೆ. ಜನ್ಮ ದಿನಾಚರಣೆಯಿಂದ ಹಿಡಿದು, ಬಹುತೇಕ ಸಾಂಪ್ರದಾಯಿಕ ಆಚರಣೆಗಳಲ್ಲಿ ಗಾಂಧಿ ಟೋಪಿ ಧರಿಸುವುದು ಕಡ್ಡಾಯ. ಗಾಂಧಿ ಟೋಪಿ ಧರಿಸದಿರುವ ಕಾರ್ಯಕ್ರಮಗಳು ಕಾರ್ಯಕ್ರಮಗಳೇ ಅಲ್ಲ.. ಎಂಬ ಮಟ್ಟಿಗೆ ಗಾಂಧಿ ಟೋಪಿ ಉಡುಗೊರೆಗಳ ಸ್ಥಾನದಲ್ಲಿ ಹಾಸು ಹೊಕ್ಕಾಗಿದೆ ಎಂದರೆ ತಪ್ಪಾಗಲಾರದು.

ಉತ್ತರ ಕರ್ನಾಟಕದ ಕೊಪ್ಪಳ, ರಾಯಚೂರು, ಗುಲಬರ್ಗಾ, ಬೀದರ, ಯಾದಗಿರಿ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಈ ಭಾಗದಲ್ಲಿ ‘ಗಾಂಧಿ ಟೋಪಿ’ ಬಹಳಷ್ಟು ಫೇಮಸ್ ಅದರ ಅಷ್ಟೇ, ಇಲ್ಲಿನವರ ಪ್ರಮುಖ ಉಡುಗೆ ಕೂಡಾ ಹೌದಾಗಿದೆ. ಇಂತಹ ಮಹತ್ವದ ಟೋಪಿಗಳನ್ನು ಮದುವೆ, ಮುಂಜಿ, ಸೀಮಂತ, ಅಂತ್ಯ ಸಂಸ್ಕಾರಗಳಲ್ಲಿ ಕಡ್ಡಾಯವಾಗಿ ಹಾಕಿಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಡ್ಡಾಯ ನಿಯಮ. ಅಷ್ಟೇ ಅಲ್ಲ, ಉಡುಗೊರೆಗಳನ್ನು ನೀಡುವಾಗ ಯಾವುದಾದರೂ ಇಲ್ಲಂದ್ರ ನಡೆಯುತ್ತದೆ ಈ ಟೋಪಿಗೆ ಮಾತ್ರ ಪ್ರಮುಖ ಸ್ಥಾನ ನೀಡಲಾಗಿರುತ್ತದೆ. ಸಂಪ್ರದಾಯದಂತೆ ಕೇವಲ ಬಿಳಿ ಬಣ್ಣದ ಟೋಪಿಗೆ ಬಹಳಷ್ಟು ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ, ಬೇರೆ ಬಣ್ಣದ ಟೋಪಿಗಳನ್ನು ಧರಿಸಲು ಯಾರು ಮನಸ್ಸು ಕೂಡಾ ಮಾಡುತ್ತಿರಲಿಲ್ಲ. ಆದರೆ, ಇಂದಿನ ಆಧುನಿಕ ಕಲರ್ ಫುಲ್ ಜಗತ್ತಿನಲ್ಲಿ ತರಹವೇ ಬಣ್ಣಗಳ ಬಟ್ಟೆಗಳಿಂದ ಸಿದ್ಧಪಡಿಸಿದ ಟೋಪಿಗಳು ಇಂದು ಬಹಳಷ್ಟು ಚಾಲ್ತಿಯಲ್ಲಿವೆ. ಆದರೆ, ನಿತ್ಯ ಉಡುಗೊರೆಯಾಗಿ ಬಳಸುವವರು ಮಾತ್ರ ‘ಶ್ವೇತ’ ಬಣ್ಣದ ಟೋಪಿ ಧರಿಸುವುದು ವೈಶಿಷ್ಟ್ಯತೆಗಳಲ್ಲೊಂದಾಗಿದೆ. ಲಕ್ಷ ಜನರ ಮಧ್ಯದಲ್ಲಿರುವ ಟೋಪಿಧಾರಿಗಳನ್ನು ಗುರುತಿಸುತ್ತಿರುವುದು ವಿಶೇಷ.

ವಿವಿಧ ಅಲಂಕಾರಿಕ ಟೋಪಿಗಳು ಕೂಡಾ ಇಂದು ಪ್ರಚಲಿತಕ್ಕೆ ಬಂದಿವೆ. ಇಂತಹ ವಿಶಿಷ್ಟತೆಯ ಗಾಂಧಿ ಟೋಪಿ, ಪ್ರದೇಶದಿಂದ ಪ್ರದೇಶಗಳಿಗೆ ಅದರ ತಕ್ಕ ಮಟ್ಟಿಗೆ ರೂಪ (ಹೊಲಿಗೆಯಲ್ಲಿ) ಬದಲಾಗುತ್ತಾ ಹೋಗುತ್ತದೆ. ಬೆಳಗಾವಿ ಜಿಲ್ಲೆಯ ಗಾಂಧಿ ಟೋಪಿ ಮಹಾರಾಷ್ಟ್ರದಲ್ಲಿ ಧರಿಸುವ ಟೋಪಿಗಳನ್ನು ಹೋಲುತ್ತದೆ. ರಾಜ್ಯದ ಅಗ್ನಿಶಾಮಕ ಸಿಬ್ಬಂದಿ ತಲೆಯ ಮೇಲಿರುವ ಟೋಪಿ ಕೂಡಾ ಗಾಂಧಿ ಟೋಪಿ ಹೋಲುತ್ತದೆ. ಅಲ್ಲದೆ, ಬಹುತೇಕ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಗಾಂಧಿ ಟೋಪಿ ಧರಿಸುವ ಸಂಪ್ರದಾಯ ಇನ್ನೂ ಜಾರಿಯಲ್ಲಿದೆ. ಪ್ರಥಮ‌ ಪ್ರಧಾನಿ ಜವಾಹರಲಾಲ್ ನೆಹರು, ಲಾಲ್ ಬಹಾದ್ದೂರ್ ಶಾಸ್ತ್ರಿ, ರಾಜಗುರು, ಸುಖದೇವ, ಹರ್ಡೇಕರ್ ಮಂಜಪ್ಪ, ಅಬ್ದುಲ್ ಗಫರ್ ಖಾನ್, ಮೈಲಾರ ಮಹದೇವಪ್ಪ, ಡಾ.ಎನ್.ಎಸ್.ಹರ್ಡೇಕರ,
ಅಣ್ಣ ಹಜಾರೆ ಸೇರಿದಂತೆ ಅನೇಕ ಜನ ಸ್ವಾತಂತ್ರ್ಯ ಸೇನಾನಿಗಳು ಕೂಡಾ ಗಾಂಧಿ ಟೋಪಿ ಪ್ರಿಯರಾಗಿದ್ದರು. ಟೋಪಿ ಮೂಲಕವಾದರೂ ವಿಶ್ವ ಮಾನವ, ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರನ್ನು ನಿತ್ಯ ಸ್ಮರಿಸುವುದು ನಮ್ಮ ಹೆಮ್ಮೆ ಅಲ್ಲವೇ..!?