ಶುರುವಾಗಲಿದೆ ಕಬ್ಬು ಸೀಜನ್..! ಘರ್ಜಿಸಲಿವೆ ಟ್ರ್ಯಾಕ್ಟರ್ ಇಂಜಿನ್..!!

 

ಕೃಷಿ ಪ್ರಿಯ ನ್ಯೂಸ್ |

ಬಾಗಲಕೋಟೆ (ಮಹಾಲಿಂಗಪೂರ) : ಗ್ರಾಮೀಣ ಭಾಗದಲ್ಲಿ ದಸರಾ-ದೀಪಾವಳಿ ಹಬ್ಬದ ಆಸು ಪಾಸಿನಲ್ಲಿ ಇನ್ನೊಂದು ಹಬ್ಬದ ಸಂಭ್ರಮ ಕಂಡು ಬರುತ್ತದೆ. ಅದುವೇ ಕಬ್ಬಿನ ಸೀಜನ್..!

ಮಹಾಲಿಂಗಪೂರ ಭಾಗದ ಸುತ್ತಲಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನುರಿಸುವ ಹಂಗಾಮಿನ ಹುಮ್ಮಸ್ಸು, ರೈತರಿಗೆ ಕಬ್ಬು ಕಟಾವು ಮಾಡುವ ಸುಗ್ಗಿಯ ಕಾಲ, ಟ್ರ್ಯಾಕ್ಟರ್‌ಗಳಿಗೆ ಕಬ್ಬು ಸಾಗಿಸುವ ಸಂಭ್ರಮದ ಸಮಯ. ಜಾತ್ರೋಪಾದಿಯಲ್ಲಿ ನಡೆಯುವ ಸೀಜನ್‌ಗೆ ಈಗಿನಿಂದಲೇ ತಯ್ಯಾರಿ ಮಾತ್ರ ಜೋರಾಗಿಯೇ ನಡೆದಿದೆ. ಬೆಳಗಾವಿ-ಚಿಕ್ಕೋಡಿ, ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳಲ್ಲಿ ಹೇರಳವಾಗಿರುವ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸು ಪ್ರಕ್ರಿಯೆ ಆರಂಭವಾದರೆ, ರಸ್ತೆ ಮೇಲೆ ಹೆಚ್ಚುವರಿ ಸಂಚಲನ ಉಂಟು ಮಾಡುವಷ್ಟು ವಾಹನಗಳ ಸಂಚಾರ ದಟ್ಟಣೆ ಕಂಡು ಬರುತ್ತದೆ. ಈ ಭಾಗದ ರೈತರು ಈಗಾಗಲೇ ಟ್ರ್ಯಾಕ್ಟರ್‌ಗಳ ಟೈರ್, ಟ್ರಾಲಿಗಳ ಪರಿಶೀಲನೆ, ಜೋಡಣೆ, ಅಲಂಕಾರ, ಟೇಪ್ ರಿಕಾರ್ಡರ್, ಸೌಂಡ್ ಅಳವಡಿಕೆ, ಹುಡ್ಡಾ ಕೋಚಿಂಗ್ ಸೇರಿದಂತೆ ಅಂದ, ಚೆಂದ, ಅಗತ್ಯ, ಸುರಕ್ಷಾ ಕ್ರಮಗಳತ್ತ ಚಿತ್ತ ಹರಿಸಿದ್ದಾರೆ. ಟ್ರ್ಯಾಕ್ಟರ್ ಮೇಲೆ ಇಷ್ಟ ದೇವರ ಹೆಸರು, ಮಕ್ಕಳ ಹೆಸರು, ಮನಗೆದ್ದ ನಾಯಕರ ಹೆಸರು, ಭಾವಪೂರ್ಣ ನುಡಿಮುತ್ತುಗಳು ಸೇರಿದಂತೆ ಜವಾರಿ ಶಾಸನಗಳನ್ನು ಬರೆಸುವ, ಚಿತ್ರ-ಚಿತ್ತಾರ ಬಿಡಿಸುವ ಮೂಲಕ ವಾಹನವನ್ನು ರತ್ನ ಖಚಿತ ರಥದಂತೆ ಕಂಗೊಳಿಸುವ ಕಾಯಕದಲ್ಲಿ ರೈತರು ನಿರತರಾಗಿದ್ದಾರೆ. ಸಮರ ರಥದ ಮೇಲೆ ಹಾರಾಡುವಂತೆ ಹುಡ್ಡಾ ಮೇಲೆ ಇಷ್ಟ ಧ್ವಜ ಹಾರಾಡಿಸುತ್ತ ಇನ್ನೇನು ರಸ್ತೆ ಮೇಲೆ ಟ್ರ್ಯಾಕ್ಟರ್‌ಗಳು ದಾಳಿ ಇಡಲಿವೆ.

ಅತ್ತ ಸರಕಾರ, ಹೋರಾಟಗಾರರು ಮತ್ತು ಕಾರ್ಖಾನೆ ಮಾಲೀಕರ ಮಧ್ಯೆ ದರ ನಿಗದಿಯ ಬದ್ಧತೆ ಕುರಿತು ಹೋರಾಟಗಳು ನಡೆದರೆ, ಇತ್ತ ಟ್ರ್ಯಾಕ್ಟರ್ ಮಾಲೀಕರು ಮತ್ತು ಕಟಾವು ಗ್ಯಾಂಗ್‌ನವರು ಯುದ್ಧಕ್ಕೆ ರಥದ ಮತ್ತು ಆಯುಧಗಳ ಸಿದ್ಧತೆ ನಡೆಸಿದಂತೆ ಸಮರೋಪಾದಿಯಲ್ಲಿ ಸನ್ನದ್ಧರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅನ್ನದಾತನ ಅಂಬಾರಿ, ರೈತನ ತೇರು ಎಂದೇ ಹೆಸರಾದ ಟ್ರ್ಯಾಕ್ಟರ್‌ಗಳು ರಸ್ತೆ ಮೇಲೆ ಘರ್ಜಿಸಲು ಗತ್ತು-ಗಮ್ಮತ್ತಿನ ಅಲಂಕಾರದೊಂದಿಗೆ ಸಿದ್ಧಗೊಳ್ಳುತ್ತಿವೆ. ಈ ಕಬ್ಬಿನ ಸೀಜನ್ ಬಂದಾಗ ಮೆಕ್ಯಾನಿಕಲ್, ವೇಲ್ಡಿಂಗ್, ಪೇಂಟಿಂಗ್, ವೈರಿಂಗ್, ಲೋಹಾರ, ಮೇದಾರ, ಲೈಟಿಂಗ್, ಸೌಂಡ್ ಸಿಸ್ಟಂ ಟೆಕ್ನಿಷಿಯನ್, ಗ್ಯಾರೇಜ್, ಪಂಕ್ಚರ್ ಅಂಗಡಿ, ಚಹಾ ಅಂಗಡಿ, ಪಾನ್ ಶಾಪ್, ಬೀರ, ವೈನ್, ಬ್ರ್ಯಾಂಡಿ ಶಾಫ್ ಸೇರಿದಂತೆ ನಾನಾ ಪರಿಣಿತರಿಗೆ ಕೈತುಂಬ ಉದ್ಯೋಗ ವರ್ತಕರಿಗೆ ಉತ್ತಮ ವ್ಯಾಪಾರ ಲಭಿಸಿ ಸರ್ವರಲ್ಲೂ ಸಂಭ್ರಮ ಎದ್ದು ಕಾಣುತ್ತದೆ. ಹೀಗಾಗಿ ರೈತ, ಕಾರ್ಮಿಕ, ವರ್ತಕ, ಮಾಲೀಕ ಮತ್ತು ಸಾರ್ವಜನಿಕ ವಲಯದಲ್ಲಿ ಸಂಭ್ರಮ ತರುವ ಈ ಕಬ್ಬಿನ ಸೀಜನ್ ಒಂದು ರೀತಿಯಲ್ಲಿ ಹಬ್ಬ ಮತ್ತು ಜಾತ್ರೆ ಎಂದೇ ಕರೆಯಬಹುದು ಅಲ್ಲವೇ..!? ಕಬ್ಬು ಬೆಳೆಗಾರರು, ಕಬ್ಬು ಕಟಾವು ಗ್ಯಾಂಗ್ ನವರ ಪಾಲಿನ ‘ಸಕ್ಕರೆ’ ಮತ್ತು ‘ಅಕ್ಕರೆ’ಯಂತಹ ಸಂಭ್ರಮಕ್ಕೆ ನಮ್ಮದೊಂದು ಸಲಾಂ..!!

 

ಸುದ್ದಿ ಕೃಪೆ : – ಶಿವಲಿಂಗ ಸಿದ್ನಾಳ ಫೀನಿಕ್ಸ್