ಚಳಿಗಾಲ ಅಧಿವೇಶನಕ್ಕೆ ಸನ್ನದ್ಧವಾದ ಸುವರ್ಣ ವಿಧಾನ ಸೌಧ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಜ್ಯದ ಎರಡನೇ ಶಾಸಕಾಂಗ ಕಟ್ಟಡ ಎಂತಲೇ ಕರೆಯಲ್ಪಡುವ ಬೆಳಗಾವಿಯ ಸುವರ್ಣ ವಿಧಾನ ಸೌಧವು ತನ್ನ 9 ನೇ ಚಳಿಗಾಲ ಅಧಿವೇಶನಕ್ಕೆ ಸಿದ್ಧವಾಗಿದೆ..!

18-12-2022 ರಿಂದ ಆರಂಭಗೊಳ್ಳುವ ಚಳಿಗಾಲ ಅಧಿವೇಶನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಸಕಲ ರೀತಿಯಲ್ಲಿ ಸಿದ್ಧವಾಗಿದೆ. ಚುನಾವಣೆ ವರ್ಷದ ಈ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಹಣಿಯಲು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತವಕದಲ್ಲಿ ತುದಿಗಾಲ ಮೇಲೆ ನಿಂತಿವೆ. ವಿಶೇಷವಾಗಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಲ್ಲೊಂದಾದ ನೀರಾವರಿ ಯೋಜನೆಗಳ ಜಾರಿಯಲ್ಲಿ ಹಿನ್ನಡೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ನೇಮಕಾತಿ ಭ್ರಷ್ಟಾಚಾರ, ಬೆಲೆ ನಿಗದಿ ಮತ್ತು ಶೇ.40 ರಷ್ಟು ಕಮಿಷನ್ ಕುರಿತು ತೀವ್ರ ಚರ್ಚೆಗಳು ಸಾಧ್ಯತೆಗಳಿವೆ.

ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸುವರ್ಣ ವಿಧಾನ ಸೌಧದಲ್ಲಿ ಈಗಾಗಲೇ 80 ದಿನಗಳ ಕಾಲ ಅಧಿವೇಶನ ನಡೆಸಲಾಗಿದೆ. ಈ ಅಧಿವೇಶನದಲ್ಲಾದರೂ ಕೃಷಿಕರ ಪರ ಸಾಕಷ್ಟು ಚಿಂತನೆಗಳು ನಡೆಯಲಿ ಎಂಬುದು ‘ಕೃಷಿ ಪ್ರಿಯ’ ಪತ್ರಿಕೆಯ ‘ಸುವರ್ಣ’ ಆಶಯ..!!