ಜಾತ್ರೆಯಲ್ಲಿ ಗಮನ ಸೆಳೆಯುವ ಪಾರಂಪರಿಕ ಕೃಷಿ ಪರಿಕರಗಳ ಕೇಂದ್ರ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಈ ವರ್ಷದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯಲ್ಲಿ ಕೃಷಿಗೆ ಸಂಬಂಧಿಸಿದ ಸ್ಟಾಲ್ ವೊಂದು ಸಾಕಷ್ಟು ಗಮನ ಸೆಳೆಯುತ್ತಿದೆ..!

ಕೃಷಿ ಇಲಾಖೆ ಏರ್ಪಡಿಸಿದ ಕೃಷಿ ವಸ್ತು ಪ್ರದರ್ಶನದ ಮಳಿಗೆಗಳಲ್ಲಿ ಗದಗ ಜಿಲ್ಲೆಯ ರೋಣ ಪಟ್ಟಣದ ನಿವಾಸಿ ಶ್ರೀ ಮಲ್ಲಯ್ಯ ಗುರುಬಸಯ್ಯ ಗುರುಬಸಪ್ಪಜ್ಜನಮಠ ಅವರು ಒಕ್ಕಲುತನಕ್ಕೆ ಸಂಬಂಧಿಸಿದ ಸಾವಿರಾರು ಪಾರಂಪರಿಕ ಕೃಷಿ ಉಪಕರಣಗಳ ಮಾದರಿ ಸಂಗ್ರಹ ಪ್ರದರ್ಶನ ಮಳಿಗೆ ಆಕರ್ಷಕ ಕೇಂದ್ರ ಬಿಂದು ಆಗಿದೆ ಎಂದರೆ ತಪ್ಪಾಗಲಾರದು.

ಮನುಕುಲವು ‘ಬೆಂಕಿ’ ಕಂಡು ಹಿಡಿದ ಬಳಿಕ ಮನುಕುಲ ಬಳಸಿದ ಬಹುತೇಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದು, ಈ ಪ್ರದರ್ಶನದ ಮಳಿಗೆಯ ವೈಶಿಷ್ಟ್ಯತೆ. ತಾಳೆಗರಿಯ ಸಂಗ್ರಹ, ಆಧುನಿಕ ಕಾಲದ ಮಸಿಯ ಬಳಕೆ, ಬಳಪದ ಕಲ್ಲು, ಆನೆ ಲದ್ದಿಯಿಂದ ತಯಾರಿಸಿದ ಹಾಳೆ, ಬರವಣಿಗೆಗಾಗಿ ಬಳಸಿದ ಗಲಗ, ಟಾಕ್ ಇವುಗಳಿಗೆ ಮಸಿ ಹಾಕುವ ದೌತಿ, ನವಿಲು ಗರಿಯ ಬಳಕೆಯನ್ನು ಈಗಲು ಬಳಸಿ ತೋರಿಸುವ ಈ ರೋಣ ಪಟ್ಟಣದ ಅಜ್ಜನ ಕೌಶಲ್ಯ ಮಾತ್ರ ಆಶ್ಚರ್ಯವಂತು ಸತ್ಯ.

ಪಾರಂಪರಿಕ ಕೃಷಿ ಪರಿಕರಗಳು : ನಾರಿನ ಕಲ್ಲಿ, ಅಳತೆ ಮಾಪನಗಳಾದ ಎರಡು ಶೇರು, ಪಾವು, ಶೇರು, ಅರಕಾಲು, ಚಟಾಕ, ನೋಟಾಕು, ನೀಟಿವಿ, ಜಾರೀಪು ದಾನ್ಯ ಸಂಗ್ರಹಕ್ಕೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಗೋತ, ಬಳತ, ಮೀನು ಬಲಿ ಅಲ್ಲದೆ, ಬೆಳಕಿಗಾಗಿ ಚಿಮ್ಮನ, ಲಾಟಾನಗಳು ವಿಭಿನ್ನ. ಕೊರೋನಾ ನಿಯಂತ್ರಣ ಕಾಲದಲ್ಲಿನ ಪ್ರಮುಖ ವಸ್ತುವಾಗಿರುವಂತೆ, ಆಗ ರಾಶಿ ಸಮಯದಲ್ಲಿ ಸುಂಕ ಬಾಯಿ ಮತ್ತು ಮೂಗುಗಳಲ್ಲಿ ಸಂಗ್ರಹವಾಗಬಾರದೆಂದು ಟೆಂಗಿನಕಾಯಿ ಚಿಪ್ಪಿನಿಂದ ತಯಾರಿಸಿದ ಬಾಯಿ ಚಿಕ್ಕ, ಬಂಡಿಯಲ್ಲಿ ಬಳಸುವ ಈಚಲು ತಟ್ಟಿ, ಕಲ್ಲಿನ ರೂಲಿನ ಬಂಡಿ, ಬಿತ್ತನೆಗೆ ಬಳಸುತ್ತಿದ್ದ ಗೋಪಾಲ ಕುಂಟೆ, (ಚೆಂಡಗೂಲ) ಬಣವಿ ನಿರ್ಮಾಣ ಸಮಯದಲ್ಲಿ ಬಳಸುತ್ತಿದ್ದ ಬಡಮನಿ, ನಾಲ್ಕು ಹಲ್ಲಿನ ಮಡಕುಂಟಿ, ಆರು ಹಲ್ಲಿನ ಜಂತುಕುಂಟಿ, ಕೊನ್ನೆ ನಗ (ಐದು ಗೆಣಿದ್ದು) 9 ಮತ್ತು 10 ಗೇಣಿನ ನಗ, ಬಡಮನಿ, ಈಳಿಗೆ, ಡೋಂಕು ಕಾಳಿನ ಕೂರುಗಿ, ಹಗೆ ಬಾಯಿ, ಬಾಯಿ ಪುಟ್ಟಿ, ನೀರು ತರಲಿಕ್ಕೆ ಬಳಸುತ್ತಿದ್ದ ಉಕ್ಕಡ, ಕೊದಾಳ ಕೂರುಗಿ, ಮುಗ್ಗೂರೂಗಿ, ಸವ ಜಂತ ಕೂರೂಗಿ, ಕೊಡತಿ, ಬಾಣಂತಿಯರ ಹೊರಸು, ಪುಂಗಿ, ಗಚ್ಚು ತಯಾರಿಸಲಿಕ್ಕೆ ಬಳಸುತ್ತಿದ್ದ ಗಚ್ಚಿನ ಗಾನ, ಆಗಿನ ಕಾಲದ ತ್ರಿಜ್ಯ, ಕಲ್ಲಿ, ಮಡಿಕಿ, ಹೆಣ್ಣು ಗಂಟೆ, ಗುಮರಿ, ಗುಗ್ಗರಿ, ಎತ್ತಿನ ತೊಡೆವು (ಜಂಗ್), ಅಡಕಲ ಗಡಗಿ, (ನೆದರ ಗಡ್ಡಿ) ಕಾಡ ಕವಡಿಕಾಯಿ, ಮುತ್ತಿನ ಶಂಕ, ಇದರಲ್ಲಿ ಎಡ ಮುರಗಿ, ಬಲ ಮುರಗಿ, ಕಡಬತ್ತು (ಕುಟ್ಟುವ ಸಾಧನ) ಕೊಂಬಣಸು, ಬೆಣ್ಣಿ ಬಳಪದ ಕಲ್ಲು, ಸವಾರಿ ಪುಟ್ಟಿ, ಎಡಿ ಮಿನಿ, ಎಂಟರ ಕನ್ನೀ, ಹಂತಿ ಕನ್ನೀ, ಗೊಂಡೆವು, ಚಿಕ್ಕ, ಚರ್ಮದ ಬಾರು, ಹಳೆ ತಿಗಟಿ (ಮಟ್ಟಲಗಿ) ಜತಿಗಿ, ಉಡಿ ಚೀಲ, ಗೆಜ್ಜೆ ಸರ, ಹಗ್ಗ, ಕವನಿ, ಕೊಳಕನ್ನಿ, ಹರಗು ಮಿನಿ, ಬಿತ್ತನೆ ಮಿನಿ, ನೆಲವು, ಕೈ ಚಿಕ್ಕ (ಜಾನುವಾರುಗಳನ್ನು ಮೈ ತೊಳೆಯಲಿಕ್ಕೆ‌ ಬಳಸುವ ಸಾಧನ) ಕರಿ ಹಗ್ಗಾ, ಚಾಟಿ, ಮಗಡ, ಎಲೆ ಚೀಲ, ಮುತ್ತಿನ ಜತಿಗಿ ಇದನ್ನು ‘ಉಡಾ’ ಚರ್ಮದಿಂದ ತಯಾರಿಸಿದ್ದು) ಕೋಡಾ (ಚಾಟಿ) ದೇವಾಲಯದಲ್ಲಿ ದೆವ್ವ, ಗಾಳಿ, ಭೂತ ಬಿಡಿಸಲು ಹನುಮ ದೇವಾಲಯದಲ್ಲಿ ನೀಡುವ ಶಿಕ್ಷೆಗಾಗಿ ಬಳಸುತ್ತಿದ್ದ ಸಾಧನ, ಚರಕ, ಕಪಲಿ ಬಾವಿ, ಎತ್ತಿನ ಜೂಲ, ಬಾಸೀಂಗ, ಕಡಗೋಲ, ಶೀರನೂಗಿ, ನೆರಗೋಲ (ಮೇವು ಹಿರಿಯಲಿಕ್ಕೆ ಬಳಸುವುದು) ಕಾಲ ದಿವಟಗಿ, ಮುತ್ತಿನ ಕೊಡಮನಸು, ಗುಣಗಡಗಿ (ಗಂಧದ ಕಟ್ಟಿಗೆಯಲ್ಲಿ ತಯಾರಿಸಿದ್ದು) ಸಾಣಿ ಹಿಡಿಯುವ ಯಂತ್ರ, ಪಲ್ಲಕ್ಕಿ, ಹಾದಿ ಕೋಲು, ಚೌರಿ, ಎಕ್ಕಾ ಗಾಡಿ, ಒಂಟಿ ಬಂಡಿ, ಹಣ ಸಂಗ್ರಹ ಪೆಟ್ಟಿಗೆ, ಸಮುದ್ರ ಪಾಚಿ, ಸಾಲಿಗ್ರಾಮ, ಶೆಡ್ಡಿ ಬಟ್ಟಲು, ಎಲೆ ಬಳ್ಳಿಯ ನಿಚ್ಚಣಿಕೆ, ಅಟ್ಟ, ರಥ, ಎತ್ತಿನ ಬಂಡಿ, ಎಣ್ಣೆ ಗಾಣ, ರಾಶಿ ಚೀಲ ತುಂಬಿದ ಬಂಡಿ, ನಿಟ್ಟಿನ ಅಟ್ಟ, ಜಮೀನು ಅಳತೆಯ ಸಾಕಳೆ, ತತ್ರಾಣಿ, ಪಿಂಗಾಣಿ, ಕೊಡತಿ, ಬಂಡಿ ಜತಿಗಿ, ಕಬ್ಬಿನ ಹಾಲಿನ ಯಂತ್ರ, ಹಳಿ ಬಂಡಿ, ನೂಲು ಪಿರಕಿ, ನೆಲವು, ತೊಗಲಿನ ಬಾರ, ಗೆಜ್ಜಿ ಸರ, ಮರದ ಗಂಟೆ, ಬಾರಕೋಲ, ಉಡಿ ಚೀಲ, ಬಾಸೀಂಗ, ಕವನಿ, ಗ್ವಾರಿ, ಪಿಂಗಾಣಿ, ಆಕಾಶ ಕಾಯಗಳ ವಿಕ್ಷಣೆ ಯಂತ್ರ, ಗ್ರಾಮೋಫೋನ್, ಗಾಳಿ ಬೀಸುವ ಸಾಧನಗಳು ಸೇರಿದಂತೆ ಹಳೆ ನೋಟುಗಳು, ನಾಣ್ಯಗಳ ಸಂಗ್ರಹ ವಿಶೇಷವಾಗಿದೆ. ಮಾದರಿ ನೀರು ಬಾವಿ, ಜಾತ್ರೆಗೆ ಬಂದಂತಹ ಯಾತ್ರಿಕರು ಈ ಹಳೆ ಮಾದರಿ ವಿಶಿಷ್ಟ ಸಂಗ್ರಹ ಕೇಂದ್ರಕ್ಕೆ ಬೇಟಿಕೊಡದೆ ಹೋಗುವವರು ಜೀವನದಲ್ಲಿ ಏನನ್ನೋ ಕಳೆದುಕೊಂಡಂತೆ ಅಗುವುದು ಸಹಜ ಎನ್ನುತ್ತಾರೆ ಮಲ್ಲಯ್ಯ ಅಜ್ಜ.

ಕನ್ನಡ ಪಂಡಿತ : 8 ನೇ ತರಗತಿ ಓದಿರುವ ರೋಣ ಪಟ್ಟಣದ ಮಲ್ಲಯ್ಯನವರು ಕನ್ನಡ ಪಂಡಿತರು. ಕನ್ನಡ ಭಾಷೆಯನ್ನು ಆಳ ಅಧ್ಯಯನ ಮಾಡಿರುವ ಇವರು ಸರಾಗವಾಗಿ ಸಂಪೂರ್ಣ ಕನ್ನಡ ಮಾತನಾಡುವುದರ ಜೊತೆಗೆ ಕನ್ನಡ ವ್ಯಾಕರಣದಲ್ಲಿ ದಿವ್ಯ ಪಂಡಿತ.

ವಿಶ್ವದಲ್ಲಿಯೇ ಇತಿಹಾಸ ಹೊಂದಿದ ಕನ್ನಡ ಭಾಷೆ ಉಳಿಯಬೇಕು. ಮಾತೃ ಭಾಷೆ ಅಳಿಯುವ ಹಂತದಲ್ಲಿದೆ. ಇದು ವಿಷಾದದ ಸಂಗತಿ. ಉಸಿರು ಇರುವವರಿಗೂ ಕನ್ನಡಕ್ಕಾಗಿ ಜೀವನ ಮುಡಿಪಾಗಿ ಇಡುತ್ತೇನೆ ಎನ್ನುತ್ತಾರೆ.

ಕನ್ನಡ ಮೇಲಿನ ಪ್ರೀತಿ ಜೊತೆಗೆ ಖಗೋಳಶಾಸ್ತ್ರ ಅಧ್ಯಯನದ ಹುಚ್ಚು ಮಲ್ಲಯ್ಯನವರಿಗೆ ಬಹಳಷ್ಟಿದೆ. ಖಗೋಳಶಾಸ್ತ್ರದ ಅಧ್ಯಯನಕ್ಕಾಗಿ (ಲಂಡನ್ ದೇಶದ 1915 ರಲ್ಲಿನ ದೂರದರ್ಶಕ ಯಂತ್ರ) ಬಹು ಕಾಲದ ಪರಿಕರಗಳನ್ನು ತಮ್ಮ ಬಳಿ ಇನ್ನೂ ಜೀವಂತವಾಗಿಸಿಕೊಂಡಿದ್ದಾರೆ..!!