ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕಳೆದ ಕೆಲವು ದಿನಗಳಿಂದ ಜನರಲ್ಲಿ ಆತಂಕ ಸೃಷ್ಟಿಸಿ ನಿದ್ದೆಗೆಡಿಸಿದ್ದ ಚಿರತೆವೊಂದನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕನ್ನಾಳ ಗುಡ್ಡದಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ..!

 

 

ಕನ್ನಾಳ ಗದ್ದೇರಹಟ್ಟಿ ಗ್ರಾಮದ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಠಿಕಾಣಿ ಹೂಡಿದ್ದ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು, ಇದರಿಂದ ಪ್ರಾಣ ಭೀತಿಯಲ್ಲಿದ್ದ ಈ ಭಾಗದ
ರೈತರು ಜಾನುವಾರುಗಳನ್ನು ಕಾಪಾಡಿಕೊಳ್ಳುವಲ್ಲಿ ನಿದ್ದೆಗೆಡುತ್ತಿದ್ದರು. ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.
ಈ ಕುರಿತು ವಲಯ ಅರಣ್ಯ ಅಧಿಕಾರಿ ಚೈತ್ರಾ ಮೆಣಸಿನಕಾಯಿ ಅವರ ನೇತೃತ್ವದ ತಂಡ ಚಿರತೆ ಸೆರೆ ಹಿಡಿಯಲು ಗುಡ್ಡಗಾಡು ಪ್ರದೇಶದಲ್ಲಿ ಬೋನ್ ಅಳವಡಿಸಿದ್ದರು. ಶನಿವಾರ (14-01-2023) ಸಂಜೆ ಏಳು ಗಂಟೆ ಸುಮಾರಿಗೆ ಬೋನೊಳಗೆ ಚಿರತೆ ಸೆರೆಯಾಗಿದೆ.
ಕಳೆದ ನಾಲ್ಕು ದಿನಗಳಿಂದ ಚಿರತೆ ಸೆರೆ ಹಿಡಿಯುವಲ್ಲಿ ಹರಸಾಹಸ ಪಡುತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ಸೆರೆಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಭಾಗದವರು ಕೃತಜ್ಞತೆ ಸಲ್ಲಿಸಿದ್ದಾರೆ.
ಚಿರತೆ ಸೆರೆಹಿಡಿಯುವಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಮಹಮ್ಮದ್ ರಿಯಾಜ್, ಹನುಮಂತಪ್ಪ, ಮಹಾಂತೇಶ್ ರೆಡ್ಡಿರ್, ಗಂಗಾಧರ್, ಛತ್ರಪ್ಪ, ತಿಪ್ಪಣ್ಣ, ಲಕ್ಷ್ಮಣ, ಚೆನ್ನಪ್ಪ ಕಾರ್ಯಾಚರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.!!