ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಈ ಹಿಂದೆ ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ (ಬಿ.ಎಸ್. ಆರ್ ಪಕ್ಷದಿಂದ) ಸ್ಪರ್ಧೆ ನೀಡಿ, ಕ್ಷೇತ್ರದಲ್ಲಿ ಬಹಳಷ್ಟು ಕಂಪನ ಸೃಷ್ಟಿಸಿದ್ದ ಬಳ್ಳಾರಿ ಮೂಲದ ಗೋನಾಳ ರಾಜಶೇಖರಗೌಡ ಅವರು ಜನಾರ್ಧನರೆಡ್ಡಿ ಸ್ಥಾಪಿಸಿದ ನೂತನ (ಕೆ.ಆರ್.ಪಿ.ಪಿ) ಪಕ್ಷದಿಂದ ಕುಷ್ಟಗಿಯಿಂದಲೇ ಮತ್ತೊಮ್ಮೆ ಸ್ಪರ್ಧೆ ನೀಡುವ ಸುದ್ದಿ ಮಾತ್ರ ಕ್ಷೇತ್ರದ ತುಂಬೆಲ್ಲಾ ಸಾಕಷ್ಟು ಸದ್ದು ಮಾಡುತ್ತಿದೆ..!?

ಈಗಾಗಲೇ ಜನಾರ್ಧನರೆಡ್ಡಿ ಹಾಗೂ ಸಚಿವ ಶ್ರೀರಾಮಲು ಅವರುಗಳಿಗೆ ಗಣಿ ವ್ಯವಹಾರಗಳಿಂದ ಹಿಡಿದು, ರಾಜಕೀಯವಾಗಿ ಬಹಳಷ್ಟು ಆಪ್ತರಾಗಿರುವ ಹಿರಿಯ ಮುಖಂಡ ಗೋನಾಳ ರಾಜಶೇಖರಗೌಡ ಅವರನ್ನು ರೆಡ್ಡಿ ಪಕ್ಷಕ್ಕೆ ಬಳ್ಳಾರಿ ಜಿಲ್ಲಾ ಅಧ್ಯಕ್ಷನನ್ನಾಗಿ ಘೋಷಿಸಿದ ಬೆನ್ನಲ್ಲೇ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಹರಿದಾಡುತ್ತಿದ್ದ ರಾಜಕೀಯ ಲೆಕ್ಕಾಚಾರದ ಚರ್ಚೆಗಳಿಗೆ ಮತ್ತಷ್ಟು ಜೀವ ಬಂದಂತಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕಾರ್ಯಗಳ ಮೂಲಕ ಸಾಕಷ್ಟು ಚಿರಪರಿಚರಾಗಿರುವ ಗೋನಾಳ ರಾಜಶೇಖರ ಅವರು 2013 ರ ಚುನಾವಣೆಯಲ್ಲಿ 18 ಸಾವಿರಕ್ಕೂ ಅಧಿಕ ಮತಗಳನ್ನು ಗಳಿಸಿದ್ದು ಇಲ್ಲಿನವರಿಗೆ ಮರೆಯಲಾರದ ಸವಿ ನೆನಪುಗಳು ಅಂದರೆ, ತಪ್ಪಾಗಲಾರದು. ಕುಷ್ಟಗಿ ಪಟ್ಟಣ ಸೇರಿದಂತೆ ಹನುಮನಾಳ ಹೋಬಳಿ ವ್ಯಾಪ್ತಿಯ ನಿಲೋಗಲ್ ಭಾಗದ ಗ್ರಾಮಗಳಲ್ಲಿ ಸಾಕಷ್ಟು ಆತ್ಮೀಯರನ್ನು ಹೊಂದಿದ ಗೋನಾಳ ರಾಜಶೇಖರಗೌಡ ಅವರು ಕುಷ್ಟಗಿ ಕ್ಷೇತ್ರಕ್ಕೆ ಚಿರಪರಿಚಿತರು. ಈ ಹಿಂದಿನ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ಸಮಯದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ, ಇಲ್ಲಿನವರ ಬಹುತೇಕ ನಾಡಿಮಿಡಿತ ಅರಿತ ಗೋನಾಳ ರಾಜಶೇಖರ ಅವರು ಬಹಳಷ್ಟು ಸಮಯದೊಂದಿಗೆ ಹಣ ತುಂಬಿದ ‘ಗಾಲಿ’ ಪಕ್ಷದೊಂದಿದೆ ಈ ಬಾರಿ ಕ್ಷೇತ್ರದಲ್ಲಿ ಸ್ಪರ್ಧೆ ನೀಡಿದ್ದೇ ಆದರೆ, ವಿಭಿನ್ನ ರೀತಿಯಲ್ಲಿ ಕಮಾಲ್ ಮಾಡುವುದಂತು ನಿಜ ಅಲ್ಲವೇ..!?
ಅನುಕಂಪದ ಅಲೆ : ಕ್ಷೇತ್ರದ ತುಂಬೆಲ್ಲಾ ಸಮಾಜ ಸೇವೆ ಸಲ್ಲಿಸಿರುವುದು ಅಲ್ಲದೆ, ಸೋಲಿನ ಅನುಕಂಪ ಹೊಂದಿರುವ ಗೋನಾಳ ರಾಜಶೇಖರಗೌಡ ಅವರು ಈ ಬಾರಿ ರೆಡ್ಡಿ ಪಕ್ಷದಿಂದ ಸ್ಪರ್ಧೆ ನೀಡಲೇಬೇಕೆಂಬುದು ಸಾವಿರಾರು ಜನ ಅಭಿಮಾನಿಗಳ ಅಭಿಪ್ರಾಯವು ಒಂದಾಗಿದೆ.

