‘ವೀರೇಶ ಕಾಜಗಾರ’ ಎಂಬ ಸಾವಯವ ಯಶಸ್ವಿ ‘ಪಪ್ಪಾಯಿ’ ಬೆಳೆಗಾರ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಇದೊಂದು ಪಪ್ಪಾಯಿ ಯಶಸ್ವಿ ಬೆಳೆಗಾರನ ಯಶೋಗಾಥೆ..!

ಈ ಯಶೋಗಾಥೆಯ ರೂವಾರಿ ಬೇರೆ ಯಾರು ಅಲ್ಲ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಗೊಣ್ಣಾಗರ ಗ್ರಾಮದ ಪ್ರಗತಿಪರ ಯುವ ರೈತ ವೀರೇಶ ಸಂಗಪ್ಪ ಕಾಜಗಾರ. 3 ಎಕರೆ ಜಮೀನಿನಲ್ಲಿ ಪಪ್ಪಾಯಿ ಬೆಳೆದ ವೀರೇಶ ಕಾಜಗಾರ ಇಲ್ಲಿಯವರೆಗೆ ಸುಮಾರು 45 ಟನ್ ಪಪ್ಪಾಯಿ ಫಸಲ ಪಡೆಯುವ ಮೂಲಕ ಯಶಸ್ವಿಯಾಗಿದ್ದಾನೆ. ಈಗಾಗಲೇ 21 ಬಾರಿ ಕಟಾವು ಮಾಡಿದ ರೈತನ ಜಮೀನಿನಲ್ಲಿ ಇನ್ನೂ ಫಸಲು ತುಂಬಿಕೊಂಡಿದೆ. ಶೇಂಗಾ, ಗೋವಿನಜೋಳ, ಸೂರ್ಯಕಾಂತಿ ಇತ್ಯಾದಿ ಸಾಂಪ್ರಾದಾಯಿಕ ಬೆಳೆಗಳನ್ನು ಬೆಳೆದು, ಪೈಸಾ ಲಾಭಾಂಶ ಇಲ್ಲದೆ, ಸಾಲದ ಸೂಳಿಯಲ್ಲಿದ್ದವನಿಗೆ ಹೊಳೆದಿದ್ದು ಪಪ್ಪಾಯಿ ಬೆಳೆದು, ಅತ್ಯಧಿಕ ಇಳುವರಿ ಪಡೆಯಬೇಕೆಂಬ ನಿರ್ಧಾರಕ್ಕೆ ಬರುತ್ತಾನೆ. ಪಪ್ಪಾಯಿ ಬೆಳೆಯುವುದಕ್ಕೆ ಇಡೀ ಹಿರೇಗೋಣ್ಣಾಗರ ಗ್ರಾಮದ ಬಹುತೇಕ ರೈತರು ನಿಪುಣರು. ಪಪ್ಪಾಯಿ ಬೆಳೆದು, ಅತ್ಯಧಿಕ ಲಾಭ ಗಿಟ್ಟಿಸಿಕೊಂಡ ಗ್ರಾಮದ ಪ್ರಗತಿಪರ ಹಿರಿಯ ರೈತನೊಬ್ಬ ಪ್ರೇಮಕ್ಕಾಗಿ ‘ಬಂಗಾರದ’ ಲೋಹದಲ್ಲಿಯೇ ಪಪ್ಪಾಯಿ ಗಿಡವನ್ನು ತಯಾರಿಸಿಟ್ಟಿದ್ದು ಇತಿಹಾಸ.

ಬೇಸಾಯ ಪದ್ಧತಿ : 12 ರೂಪಾಯಿಗಳ ದರದಲ್ಲಿ (ಪಪ್ಪಾಯಿ ತಳಿ ನಂಬರ್-15) ಪಂದ್ರಾ ಎಂಬ ತಳಿಯನ್ನು ವಿಜಯಪುರದಿಂದ ಖರೀದಿಸಿಕೊಂಡು ಬಂದಿರುವ ರೈತ ವೀರೇಶ ದಿನಾಂಕ 28-10-2021 ರಂದು ಮೂರು ಎಕರೆ ಜಮೀನಿನಲ್ಲಿ 3400 ಸಸಿಗಳ ನಾಟಿಗೆ ಮುಂದಾಗುತ್ತಾನೆ. ಸಸಿಗಳ ನಾಟಿಗೆ ಮುನ್ನ ಜಮೀನು ಹದಗೊಳಿಸಿಕೊಂಡು, ಕೊಟ್ಟಿಗೆ ಗೊಬ್ಬರ ಮಿಶ್ರಣಕ್ಕೆ ಮುಂದಾಗಿರುವುದು ವಿಶೇಷ. ಸಸಿಯಿಂದ ಸಸಿಗೆ 5 ಅಡಿ, ಸಾಲಿನಿಂದ ಸಾಲಿಗೆ 6 ಅಡಿ ತೋಟಗಾರಿಕೆ ನಿಯಮದ ಪ್ರಕಾರ ಸಾಕಷ್ಟು ತೇವಾಂಶದಲ್ಲಿ 2 ಅಡಿ ಅಗಲ 3 ಅಡಿ ಆಳದ ಗುಂಡಿಗೆಯಲ್ಲಿ ಸಸಿಗಳನ್ನು ನಾಟಿ ಮಾಡಲಾಗಿದೆ. ಈ ರೈತನ ‘ಪಪ್ಪಾಯಿ ಬೇಸಾಯ ಪದ್ಧತಿ’ಯಲ್ಲಿ ಸಂಪೂರ್ಣ ಸಾವಯವ ಗೊಬ್ಬರ ಬಳಸಿರುವುದು ರೈತನ ವಿಶೇಷತೆ. 8 ತಿಂಗಳಿಗಾಗಲೇ ಕಾಟವಿಗೆ ಬಂದಿದ್ದ ಪಪ್ಪಾಯಿ ಮೊದಲ ಕಟಾವಿಗೆ 1 ಟನ್ ಇಳುವರಿ ಪಡೆಯಲಾಗಿತು. ಸ್ಥಳೀಯ ಖರೀದಿದಾರರೊಬ್ಬರು ಇಲ್ಲಿಯವರೆಗೂ 45 ಟನ್ ಹಣ್ಣು ಖರೀದಿಸಿದ್ದಾರೆ. 12 ರೂಪಾಯಿಗಳ ದರದಿಂದ 21 ರೂಪಾಯಿಗಳ ದರದಲ್ಲಿ ಹಣ್ಣನ್ನು ಮಾರಾಟ ಮಾಡಲಾಗಿದೆ. ಜಮೀನಿನಲ್ಲಿಯೇ ತೂಕ ನಿಗದಿಪಡಿಸಿಕೊಂಡು ರೈತ ಹಣ ಪಡೆದಿದ್ದಾನೆ. ಸಾಗುವಳಿ ಸೇರಿದಂತೆ ಕಳೆ, ಗೊಬ್ಬರ, ಕೂಲಿ, ಸಾವಯವ ಗೊಬ್ಬರ ಬಳಕೆ, ರೋಗ ನಿಯಂತ್ರಣಕ್ಕೆ ಕ್ರಿಮೀನಾಶಕ ಇತ್ಯಾದಿ ಒಟ್ಟು 2 ಲಕ್ಷ ರೂಪಾಯಿಗಳವರೆಗೆ ಹಣ ಕರ್ಚು ಮಾಡಿದ್ದಾನೆ. ಅಂದಾಜು 7 ಲಕ್ಷ ರೂಪಾಯಿಗಳ ಆದಾಯದಲ್ಲಿ 2 ಲಕ್ಷ ರೂಪಾಯಿಗಳ ಕರ್ಚು ತೆಗೆಯಲಾಗಿ ಅಂದಾಜು 5 ಲಕ್ಷ ರೂಪಾಯಿಗಳಷ್ಟು ನಿವ್ವಳ ಆದಾಯವನ್ನು 15 ತಿಂಗಳುಗಳಲ್ಲಿ ಪಡೆಯುವಲ್ಲಿ ರೈತ ಯಶಸ್ವಿಯಾಗಿದ್ದಾನೆ.

ಮಾರಾಟ : ಮಂಗಳೂರು, ಗೋವಾ ಹಾಗೂ ಹೈದ್ರಾಬಾದ್ ನಗರಗಳಿಗೆ ಮಾರಾಟವಾದ ವೀರೇಶ ಸಂಗಪ್ಪ ಕಾಜಗಾರ ರೈತನ ಪಪ್ಪಾಯಿ ಮಾತ್ರ ಕಮಾಲ್ ಮಾಡಿದ್ದಂತು ಸತ್ಯ. ಕೊಟ್ಟಿಗೆ ಗೊಬ್ಬರದ ಜೊತೆಗೆ ಹನಿ ನೀರಾವರಿ ಅಳವಡಿಸಿಕೊಂಡು ಪಕ್ಕಾ (ಪಪ್ಪಾಯಿ-15 ತಳಿ) ಸಸಿ ಮಾಡಿದ್ದಾದರೇ.. ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಯುವ ರೈತ ವೀರೇಶ ಕಾಜಗಾರ..!!

ಸಂಪರ್ಕಕ್ಕೆ :
ವೀರೇಶ ಕಾಜಗಾರ
ಸಾ.ಹಿರೇಗೊಣ್ಣಾಗರ
ತಾ.ಕುಷ್ಟಗಿ
ಮೊ : 98456 89458

 

One thought on “‘ವೀರೇಶ ಕಾಜಗಾರ’ ಎಂಬ ಸಾವಯವ ಯಶಸ್ವಿ ‘ಪಪ್ಪಾಯಿ’ ಬೆಳೆಗಾರ..!

Comments are closed.