ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ ಶ್ರೀ ಶರಣಬಸವೇಶ್ವರ ಜಾತ್ರಾ ಅಂಗವಾಗಿ ಹಮ್ಮಿಕೊಂಡಿದ್ದ ಮಹಾ ರಥೋತ್ಸವವು ಸಾವಿರಾರು ಜನ ಭಕ್ತರ ಮಧ್ಯ ಸಡಗರ ಸಂಭ್ರಮದಿಂದ ಜರುಗಿತು..!
ಕುದರಿಮೋತಿ ಮೈಸೂರು ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಅಡ್ನೂರಿನ ಅಭಿನವ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಹುಣಸಿಹಾಳದ ಶ್ರೀ ಶಾಂತವೀರ ಮಹಾಸ್ವಾಮಿಗಳು ಕೂಡಾ ಭಾಗವಹಿಸಿದ್ದರು. ಖ್ಯಾತ ಪುರಾಣ ಪ್ರವಚನಕಾರ ಶ್ರೀ ವೀರೇಶ್ವರ ಶಾಸ್ತಿಗಳು, ಗವಾಯಿ ಚಂದಾಲಿಂಗಯ್ಯ ಹಿರೇಮಠ ಹಾಗೂ ತಬಲಾಜೀ ಚಿದಾನಂದ ಬಡಿಗೇರ ಸೇರಿದಂತೆ ಹನುಮನಾಳದ ಗಣ್ಯರು ಉಪಸ್ಥಿತರಿದ್ದರು. ರಥೋತ್ಸವಕ್ಕೂ ಮುನ್ನ ರಂಗಾಪೂರ ಗ್ರಾಮದಿಂದ ಆಗಮಿಸುವ ಕಳಸದ ಹಾಗೂ ತುಗ್ಗಲಡೋಣಿ ಗ್ರಾಮದಿಂದ ಆಗಮಿಸುವ ಹಗ್ಗದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾಧ್ಯಗಳೊಂದಿಗೆ ಸಡಗರದಿಂದ ನಡೆಯಿತು. ಇದಕ್ಕೂ ಮುನ್ನ ಬೆಳಿಗ್ಗೆ, 13 ದಿನಗಳಿಂದ ಸಾಂಗವಾಗಿ ಜರುಗಿ ಬಂದ ಮೈಸೂರು ಮಠದ ಒಂದನೇ “ಜಗದ್ಗುರು ಶ್ರೀ ಗುರು ಮಹಾಂತ ಲೀಲೆ” ಎಂಬ ಪುರಾಣವು ಇಂದು ಮಹಾ ಮಂಗಲವಾಗಿತು. ಕಾರ್ಯಕ್ರಮದಲ್ಲಿ ಶ್ರಮಿಸಿದ ಮಹನೀಯರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ, ಸತ್ಕರಿಸಲಾಗಿತು..!!
