ಅಕಾಡೆಮಿ ಬೈಲಾ ತಿದ್ದುಪಡಿಯಾಗಬೇಕು ಉಕ ಪತ್ರಕರ್ತರ ಆಗ್ರಹ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : “ಮಾಧ್ಯಮ ಅಕಾಡೆಮಿಯ ಬೈಲಾ ಕೂಡಲೇ ತಿದ್ದುಪಡಿಯಾಗಬೇಕು” ಎಂಬ ಒಕ್ಕೊರಲಿನ ಒತ್ತಾಯ ಉತ್ತರ ಕರ್ನಾಟಕ ಭಾಗದ ಪತ್ರಕರ್ತರು ನಡೆಸಿದ ಆನ್ ಲೈನ್ ವಿಚಾರ ಸಂಕಿರಣದಲ್ಲಿ ಬಹುತೇಕ ಹಿರಿಯ ಪತ್ರಕರ್ತರಿಂದ ಅಭಿಪ್ರಾಯಗಳು ಕೇಳಿ ಬಂದಿವೆ..!

ಪ್ರಶಸ್ತಿಗಳ ಘನತೆ ಹೆಚ್ಚಿಸುವುದು ಹೇಗೆ..? (ತಾರತಮ್ಯಕ್ಕೆ ಕೊನೆ ಎಂದು..?) ಎಂಬ ವಿಷಯ ಮಂಡನೆಯನ್ನು ನವದೆಹಲಿಯ ಹಿರಿಯ ಪತ್ರಕರ್ತರಾದ ಸುಭಾಸ ಹೂಗಾರ ಅವರು ಬಹಳಷ್ಟು ಅರ್ಥ ಪೂರ್ಣವಾಗಿ ವಿಷಯ ಮಂಡಿಸಿದರು. ಜೊತೆಗೆ ಸರಕಾರ ಅಕಾಡೆಮಿ ಇತ್ಯಾದಿಗಳು ನೀಡುವ ಪ್ರಶಸ್ತಿಗಳು ಹೇಗೆ ಇರಬೇಕು. ಈ ಸಧ್ಯ ವಿಶೇಷವಾಗಿ ರಾಜ್ಯದ ಮಾಧ್ಯಮ ಅಕಾಡೆಮಿ ಏನು ಲೋಪ ದೋಷವೆಸಗಿದೆ ಇತ್ಯಾದಿಗಳ ವಿಷಯ ಮಂಡನೆಯನ್ನು ಬಹಳಷ್ಟು ಮನಮುಟ್ಟುವ ರೀತಿಯಲ್ಲಿ ಪ್ರಸ್ತುತಪಡಿಸಿದರು. ಅಲ್ಲದೆ, ಈ ಸದ್ಯ ಮಾಧ್ಯಮ ಅಕಾಡೆಮಿಯಿಂದ 145 ಜನ ಪತ್ರಕರ್ತರಿಗೆ ಪ್ರಕಟಿಸಿದ ಪ್ರಶಸ್ತಿ ಪಟ್ಟಿಗೆ ನಮ್ಮ ವಿರೋಧವಿಲ್ಲ ಎಂಬ ಸ್ಪಷ್ಟನೆಯ ಮಾತುಗಳೊಂದಿಗೆ ಉತ್ತರ ಕರ್ನಾಟಕದ ಬಹುತೇಕ ಅರ್ಹ ಪತ್ರಕರ್ತರು ಯಾವ ಯಾವ ಕಾರಣಗಳಿಂದ ಈ ವಿಶಿಷ್ಟ ಪ್ರಶಸ್ತಿಗಳಿಂದ ದೂರವಾಗುತ್ತಿದ್ದಾರೆ ಎಂಬ ವಿವರಣೆ ಮಾತ್ರ ಎಲ್ಲರನ್ನ ಟಚ್ ಮಾಡುವಂತಿದ್ದವು. ಈ ಭಾಗದ ಪತ್ರಕರ್ತರಿಗೆ ಆಗಿರುವ ತಾರತಮ್ಯದ ಹೋರಾಟ ಇದು ಕೇವಲ ಆರಂಭವೆಂಬ ಮುನ್ಸೂಚನೆಗಳನ್ನು ತಮ್ಮ ವಿಷಯ ಮಂಡನೆಯಲ್ಲಿ ಸ್ಪಷ್ಟಪಡಿಸಿದ್ದು, ಮಾಧ್ಯಮ ಅಕಾಡೆಮಿ ಸೇರಿದಂತೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ಗಂಟೆ ರೂಪದಲ್ಲಿತ್ತು.

ಬೆಂಗಳೂರಿಗೆ ಸೀಮಿತವಾಗಿರುವ ಮಾಧ್ಯಮ ಅಕಾಡೆಮಿ ವ್ಯಾಪ್ತಿ ಮೊದಲು ಬದಲಾಗಿ, ರಾಜ್ಯ ವ್ಯಾಪ್ತಿಗೆ ಸದಸ್ಯರನ್ನೊಳಗೊಂಡಂತೆ ಪ್ರಶಸ್ತಿ ಹಾಗೂ ಕಾರ್ಯತಂತ್ರಗಳಿಗೆ ಬದಲಾಗಬೇಕು. ಪ್ರಶಸ್ತಿಗಳ ಮಾನದಂಡದ ಜೊತೆಗೆ ಪತ್ರಕರ್ತರ ಸ್ಥಾನಮಾನಗಳಿಗೆ ಗೌರವ ನೀಡುವಂತಾಗಬೇಕು. ರಾಜ್ಯವನ್ನು ಒಡೆದು ಆಳುವಂತಾಗಬಾರದು, ಹುಬ್ಬಳ್ಳಿಗೆ ಅಕಾಡೆಮಿ ಕಚೇರಿ ಮೊದಲು ಸ್ಥಳಾಂತರವಾಗಬೇಕು. ಸಮಗ್ರ ಪತ್ರಕರ್ತರ ಆಶಯಗಳಿಗೆ, ಕಷ್ಟ ಸುಖಗಳಿಗೆ ಕಣ್ಣಾಗಬೇಕೆಂದು ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ ವಿಚಾರ ಸಂಕಿರಣದಲ್ಲಿ ಅಭಿಪ್ರಾಯವ್ಯಕ್ತಪಡಿಸಿದರು.

ಮಾಧ್ಯಮ ಅಕಾಡೆಮಿಯ ಬೈಲಾ ತಿದ್ದುಪಡಿ ತರುವ ಮೂಲಕ, ಕಡ್ಡಾಯವಾಗಿ ಜಿಲ್ಲೆಗೆ ಒಬ್ಬರಂತೆ ಮಾಧ್ಯಮ ಅಕಾಡೆಮಿ ಸದಸ್ಯರು, ಮತ್ತು ಪ್ರಶಸ್ತಿಗಳಿಗೆ ಆಯ್ಕೆಯಾಗುವಂತಾಗಬೇಕು ಎಂಬ ಪ್ರಶಸ್ತಿಗಳ ವಂಚಿತರ ಬಗ್ಗೆ ಮಾತನಾಡುವಾಗ
ಇನ್ನೋರ್ವ ಹಿರಿಯ ಪತ್ರಕರ್ತ ಟಿ.ವಿ.ಶಿವಾನಂದ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಾಕಷ್ಟು ಸರ್ಕಸ್ ಮಾಡುವ ಮೂಲಕ ಹತ್ತಾರು ಸಭೆ, ಚರ್ಚೆಗಳ ಮೂಲಕ ಕಷ್ಟಪಟ್ಟು ಈ ಬಾರಿ ಪ್ರಕಟವಾದ ಪ್ರಶಸ್ತಿಗಳ 145 ಜನರ ಪಟ್ಟಿ ತಯಾರಿಸಲಾಗಿದೆ. ಇದರಲ್ಲಿ ಯಾವ ಅನುಮಾನವು ಬೇಡ. ಆದಾಗ್ಯೂ ಎಲ್ಲವೂ ನಡೆದಿವೆ, ಜಾತಿ, ಒತ್ತಡ, ತಂತ್ರಗಾರಿಕೆ ರಾಜಕಾರಣ ನಡೆದಿಲ್ಲವೆಂದು ಹೇಳಲು ನಾವು ತಯಾರಿಲ್ಲ. ಇದಕ್ಕೆಲ್ಲಾ ಸರಕಾರದ ಮಟ್ಟದಲ್ಲಿ ನಡೆದಿರುವ ಕೆಲಸಗಳು ಬಹಳಷ್ಟಿವೆ. ಅಕಾಡೆಮಿಯ ಮೂಲ ಬೈಲಾ ತಿದ್ದುಪಡಿ ಆಗಬೇಕು ಎಂದ ಅವರು, ಮುಂಬರುವ ದಿನಗಳಲ್ಲಿ ಎಲ್ಲವು ಸರಿ ಹೋಗಲಿವೆ. ನಾವೆಲ್ಲಾ ಪತ್ರಕರ್ತರು ಒಂದೇ, ಸಮಗ್ರತೆ ಭಾವನೆಗಳಿಂದ ಬದುಕಬೇಕಾಗಿದೆ. ಇಲ್ಲಿಗೆ ವಿಷಯ ಸಮಾಪ್ತಿಗೊಳಿಸಲು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದರು.

ಮಹಿಳಾ ಪತ್ರಕರ್ತೆಯರಿಗೆ ಸಮಾನತೆ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಆಗುವ ಅನ್ಯಾಯದ ವಿರುದ್ಧ ಮಾತನಾಡಿ, ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ಎಲ್ಲದರಲ್ಲೂ ಅವಕಾಶ ನೀಡುವಂತೆ ಮಹಿಳಾ ಪತ್ರಕರ್ತೆಯರ ಸಂಘದ ರಾಜ್ಯಾಧ್ಯಕ್ಷೆ ಪದ್ಮಾ ಶಿವಮೊಗ್ಗ ಎಚ್ಚರಿಕೆ ನೀಡಿದರು.

ಮಾಧ್ಯಮ ಅಕಾಡೆಮಿಗೆ ಇಬ್ಬರು ಮಹಿಳಾ ಸದಸ್ಯರನ್ನು ನೇಮಿಸುವಂತೆ ಸರಕಾರ ಆದೇಶ ಹೊರಡಿಸಿದರು ಕೂಡಾ ಇತ್ತೀಚಿನ ಅಕಾಡೆಮಿಯ ಸದಸ್ಯರ ನೇಮಕದಲ್ಲಿ ಈ ಕ್ರಮ ಆಗಲಿಲ್ಲವೆಂದು ಹಿರಿಯ ಪತ್ರಕರ್ತೆ ಮಾಲತಿ ಭಟ್ ಬೇಸರವ್ಯಕ್ತಪಡಿಸಿದರು.

ಬೇರೆ ಬೇರೆ ರಾಜ್ಯಗಳಲ್ಲಿನ ಮಾಧ್ಯಮ ಅಕಾಡೆಮಿ ಬೈಲಾ ಸೇರಿದಂತೆ ಆಡಳಿತ ವೈಖರಿ ಮತ್ತು ಪ್ರಶಸ್ತಿಗಳಿಗೆ ಆಯ್ಕೆ ಮಾನದಂಡ ಇತ್ಯಾದಿಗಳ ಅಧ್ಯಯನ ನಡೆಸಿ, ರಾಜ್ಯದಲ್ಲಿನ ಅಕಾಡೆಮಿ ಬದಲಾಗಬೇಕೆಂದು ಹಿರಿಯ ಪತ್ರಕರ್ತ ಮೊಹನ್ ಹೆಗ್ಡೆ ಸೂಚನೆ ನೀಡಿದರು. ಅಲ್ಲದೆ, ರಾಜ್ಯದಲ್ಲಿ ಈ ಪ್ರಕಟವಾದ ಪಟ್ಟಿಯಲ್ಲಿ ಆಗಿರುವ ಲೋಪಗಳ ಬಗ್ಗೆ ಆಗಿರುವ ಕೂಡಾ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡರು. ಈ ಸಂದರ್ಭದಲ್ಲಿ ವಿಚಾರ ಸಂಕಿರಣ ತಾರಕ ಹಂತಕ್ಕೆ ತಲುಪಿದಂತಾಗಿದ್ದು ಕಂಡು ಬಂದಿತು. ಕೆಲ ಹಿರಿಯರ ಮಧ್ಯ ಪ್ರವೇಶದಿಂದ ಕೂಡಲೇ ತಿಳಿಯಾಗಿತು.

ರಾಯಚೂರು ಜಿಲ್ಲೆಯಲ್ಲಿ ಅಕಾಡೆಮಿಯಿಂದ ಕೇವಲ ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡಲಾಗಿದೆ. ಅವರ ಬಗ್ಗೆ ನಮಗೆ ಅಭಿಮಾನವಿದೆ. ಆದರೆ ಯಾವ ಮಾನದಂಡ ಅನುಸರಿಸಲಾಗಿದೆ. ಯಾವ ಮಾನದಂಡವು ಇಲ್ಲಿ ಬಳಕೆಯಾಗಿಲ್ಲ. ಹೈದ್ರಾಬಾದ್ ಕರ್ನಾಟಕದ ಹಿಂದುಳಿದ ದೊಡ್ಡ ಜಿಲ್ಲೆಗೆ ಅವಮಾನವೆಂದು
ರಾಯಚೂರಿನ ಹಿರಿಯ ವರದಿಗಾರರಾದ ಜಗನ್ನಾಥ ದೇಸಾಯಿ ಪ್ರಶ್ನಿಸಿದರು. ಅಲ್ಲದೆ, ಇನ್ನೂ ಕೆಲ ವರದಿಗಾರರು ಮಾತನಾಡಿ, ಇದು ಕೇವಲ ಆರಂಭ ಮಾತ್ರ ಎಂಬ ಮಾತುಗಳನ್ನಾಡಿದರು.

ಬೆಳಗಾವಿಯ ಹಿರಿಯ ಪತ್ರಕರ್ತ ರಿಷಿಕೇಶ ಬಹದ್ದೂರು ದೇಸಾಯಿ ವಿಚಾರ ಸಂಕಿರಣದ ಕೆಲ ಕರಡು ನಿರ್ಣಯಗಳನ್ನು ಮಂಡಿಸಿದರು.

ಗುಲಬುರ್ಗಾದ ಹಿರಿಯ ಪತ್ರಕರ್ತ ಮನೋಜಕುಮಾರ ಗುದ್ದಿ ವಂದಿಸಿದರು.

ಹುಬ್ಬಳಿಯ ಹಿರಿಯ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಸಂಪೂರ್ಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವವಹಿಸಿದರು. ಹಿರಿಯ ಪತ್ರಕರ್ತರಾದ ಹುಬ್ಬಳ್ಳಿಯ ವಿಜಯ ಹೂಗಾರ, ಬಸವರಾಜ ಮರಳಿಹಳ್ಳಿ, ಬಸವರಾಜ ಕಟ್ಟಿಮನಿ, ಮಹೇಶ ಶೆಟಗಾರ ಸೇರಿದಂತೆ ಎರಡು ನೂರಕ್ಕೂ ಅಧಿಕ ಪತ್ರಕರ್ತರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.