ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆ, ರಾಷ್ಟ್ರ ಪ್ರೇಮ ಮೂಡಿಸಲು ರಾಷ್ಟ್ರ ಗೀತೆ ಹಾಡಿಸುವುದು ಸರ್ವೇ ಸಾಮಾನ್ಯ. ಆದರೆ, ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆಯಲ್ಲಿ ಪೌರಕಾರ್ಮಿಕರು ಪ್ರತಿನಿತ್ಯ ಬೆಳಗ್ಗೆ ರಾಷ್ಟ್ರ ಗೀತೆ ಹಾಡಿ ಗೌರವ ಸಲ್ಲಿಸುವ ಮೂಲಕ ನಗರದ ಸ್ವಚ್ಛತಾ ಕಾರ್ಯಕ್ಕೆ ಅಣಿಯಾಗುತ್ತಿರುವುದು ಪುರಸಭೆಯ ವಿಶೇಷತೆ..!
ಸ್ವಾತಂತ್ರ್ಯ ದೊರಕಿ 75 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಇಡೀ ದೇಶವೇ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಆದರೆ, ಈ ಸಂಭ್ರಮಕ್ಕೆ ಮತ್ತಷ್ಟು ಪುಷ್ಠಿ ತುಂಬಲು ಇತ್ತೀಚೆಗೆ ಕುಷ್ಟಗಿ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಧರಣೇಂದ್ರಕುಮಾರ ಡಿ.ಎನ್ ಎಂಬುವರು ಪೌರಕಾರ್ಮಿಕರಲ್ಲಿ ರಾಷ್ಟ್ರೀಯತೆ ಹಾಗೂ ರಾಷ್ಟ್ರ ಪ್ರೇಮ ಜಾಗೃತಿ ಮೂಡಿಸಲು ರಾಷ್ಟ್ರ ಗೀತೆ ಹಾಡಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ದೇಶ ಪ್ರೇಮ ಮೂಡಿಸುತ್ತಿರುವ ಪುರಸಭೆಯ ಈ ವಿಭಿನ್ನ ಅಧಿಕಾರಿಯ ಕಾರ್ಯಕ್ಕೆ ನಮ್ಮದೊಂದು ಸಲಾಂ..!!