ಪ್ರಮುಖ ರಸ್ತೆಗೆ ಕಲ್ಲು ಸುರಿದು ಸಂಪರ್ಕ ನಿಲ್ಲಿಸಿದ ಭೂಪ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಮಧ್ಯ ರಸ್ತೆವರೆಗೂ ತನ್ನ ಆಸ್ತಿ ಇದೆ ಎಂದು ರಸ್ತೆಗೆ ಕಲ್ಲುಗಳನ್ನು ಸುರಿದು, ಗ್ರಾಮಕ್ಕಿರುವ ಪ್ರಮುಖ ರಸ್ತೆ ಸಂಪರ್ಕ ತಡೆದಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಗ್ರಾಮದಲ್ಲಿ ಜರುಗಿದೆ..!

 

ಹನುಮನಾಳ ದಿಂದ ಗೂಡೂರು ಸಂಪರ್ಕಕ್ಕೆ ಇರುವ ಮುಖ್ಯ ರಸ್ತೆಗೆ ಹತ್ತಿಕೊಂಡಿರುವ ಮನೆಯ ಮಾಲಿಕ ಚನ್ನಪ್ಪ ಅಂಗಡಿ ಎಂಬುವರು ತನ್ನ ಆಸ್ತಿ ಮುಖ್ಯ ರಸ್ತೆಯ ಬಹುತೇಕ ಪಾಲು ನನ್ನ ಪಾಲಿಗೆ ಸೇರುತ್ತದೆ ಎಂದು ರಸ್ತೆಗೆ ಕಲ್ಲುಗಳನ್ನು ಸುರಿದು, ರಸ್ತೆ ಸಂಪರ್ಕ ತಡೆದಿರುವುದರಿಂದ ಗ್ರಾಮಸ್ಥರು ಹಾಗೂ ವ್ಯಕ್ತಿ ಹಾಗೂ ಕುಟುಂಬಸ್ಥರ ನಡುವೆ ಮಾತಿನ ಚಕಮುಖಿ ಕೂಡಾ ನಡೆದಿರುತ್ತದೆ. ಈ ಆಸ್ತಿ ವಿವಾದ ಬಹಳಷ್ಟು ದಿನಗಳಿಂದ ನಡೆದು ಬಂದಿದೆ. ಆಸ್ತಿ ಖರೀದಿ ಮೂಲ ಕಾಗದ ಪತ್ರಗಳಲ್ಲಿ ಅಳತೆ ಬೇರೆ ಇದೆ. ಆದರೆ, ಈ ವಿವಾದಿತ ಆಸ್ತಿ ಮಾಲಿಕ ತನ್ನ ಆಸ್ತಿ 8 ಫೀಟ್ ರಸ್ತೆವರೆಗೆ ಬರುತ್ತದೆ ಎಂದು ಕಲ್ಲುಗಳನ್ನು ಹಾಕಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಬಂದ್ : ಆಸ್ತಿ ವಿವಾದದಿಂದ ಬೆಳಿಗ್ಗೆ 6 ಗಂಟೆಗೆ ಗೂಡುರು ಕಡೆಯಿಂದ ಕುಷ್ಟಗಿಗೆ ತೆರಳಬೇಕಾಗಿದ್ದ ಬಸ್ ಹಿಂತಿರುಗಿ ನಿಲೋಗಲ್ ಮೂಲಕ ರಸ್ತೆ ಬದಲಿಸಿಕೊಂಡು ಸಂಚರಿಸಿದೆ. ಗ್ರಾಮದ ಪ್ರಮುಖ ರಸ್ತೆಯ ಸಂಪರ್ಕ ಸಂಪೂರ್ಣ ನಿಂತು ಹೋಗಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ.

ಪರೀಕ್ಷೆ : ಘಟನೆಯಿಂದ ಗ್ರಾಮದ ಪಿಯು ವಿದ್ಯಾರ್ಥಿಗಳು ಕುಷ್ಟಗಿ ಪಟ್ಟಣಕ್ಕೆ ಪರೀಕ್ಷೆಗೆ ತೆರಳಬೇಕಾದರೆ ಕೆಲ ಸಮಯ ಬಸ್ ತಾಪತ್ರೆ ಅನುಭವಿಸಿದ ಪ್ರಸಂಗ ಜರುಗಿತು ಎಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.