ಯಲಬುರ್ಗಾ ಕ್ಷೇತ್ರದಿಂದ ಪತ್ರಕರ್ತರೊಬ್ಬರು ಪೈಪೋಟಿ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ, ಅದರಲ್ಲಿ ಅತ್ಯಂತ ಪ್ರಭಾವಿ ‘ರಡ್ಡಿ’ ಸಮುದಾಯದ ಇಬ್ಬರು ದಿಗ್ಗಜ ನಾಯಕರುಗಳ ಪೈಪೋಟಿಗೆ ಹೆಸರಾಗಿರುವ ‘ಯಲಬುರ್ಗಾ’ ವಿಧಾನಸಭಾ ಕ್ಷೇತ್ರದಲ್ಲಿ ಪತ್ರಕರ್ತರೊಬ್ಬರು ಪೈಪೋಟಿಗೆ ಸನ್ನದ್ಧರಾಗುತ್ತಿರುವುದು ವಿಶೇಷ..!

ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರ ತನ್ನದೇ ಆದ ವಿಶಿಷ್ಟತೆ ಹೊಂದಿದೆ. ಈ ಬಾರಿಯ ವಿಧಾನಸಭಾ ಚುನಾವಣಾ ಕಣದಲ್ಲಿ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಕಾಂಗ್ರೆಸ್ ನಿಂದ ಸ್ಪರ್ಧೆ ನೀಡುವುದು ಪಕ್ಕಾ. ಹಾಲಿ ಶಾಸಕ ಹಾಗೂ ಸಚಿವ ಹಾಲಪ್ಪ ಆಚಾರ್ಯ ಬಿಜೆಪಿಯಿಂದ ಮತ್ತೊಮ್ಮೆ ಕಣದಲ್ಲಿ ಉಳಿಯುವುದು ಖಚಿತ ಆದಂತಾಗಿದೆ. ಈ ಇಬ್ಬರು ಮಹಾ ಘಟಾನುಘಟಿಗಳ ನಾಯಕರ ನೇರ ಸ್ಪರ್ಧೆ ಜರಗುವ ಚುನಾವಣೆಯಲ್ಲಿ ವೃತ್ತಿಯಿಂದ ಪತ್ರಕರ್ತರಾಗಿರುವ ‘ಮೌಲಾಹುಸೇನ್ ಬುಲ್ಡಿಯಾರ್’ ಅವರು ಆಪ್ (AAP) ಆಮ್ ಆದಮಿ ಪಾರ್ಟಿಯಿಂದ ಸ್ಪರ್ಧೆ ನೀಡುವುದು ಬಹುತೇಕ ಖಚಿತವಾಗಿದೆ. ಪತ್ರಕರ್ತ ವೃತ್ತಿಗೆ ಬರುವ ಮುನ್ನ ಮೌಲಾಹುಸೇನ್ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರ ಗರಡಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಗುರುತಿಸಿಕೊಂಡವರು. ಸದಾಕಾಲವೂ ಸಮ ಸಮಾಜದ ಬಗ್ಗೆ ಕನಸು ಕಾಣುತ್ತಿರುವ ಇವರು, ಈ ಬಾರಿ ತಮ್ಮ ಸಾಮರ್ಥ್ಯ ಪರೀಕ್ಷೆಯ ಜೊತೆಗೆ ಕ್ಷೇತ್ರದಲ್ಲಿ 3 ನೇ ಶಕ್ತಿಯಾಗಿ ಬೆಳೆಯಬೇಕು. ಒಂದೇ ‘ರಡ್ಡಿ’ ಸಮುದಾಯದ ಕೇವಲ ಇಬ್ಬರು ನಾಯಕರ ಹೋರಾಟಕ್ಕೆ ಕ್ಷೇತ್ರ ಸೀಮಿತವಾಗಿರಬಾರದು. ಮೂರನೇ ವ್ಯಕ್ತಿ ಆಯ್ಕೆಯಲ್ಲಿರುವ ಮನಸ್ಥಿತಿಯ ಮತದಾರ ಪ್ರಭುಗಳಿಗೆ ಇದೊಂದು ಸುವರ್ಣ ಅವಕಾಶ ಎಂದು ಹೇಳಿಕೊಳ್ಳುವ ಮೌಲಾಹುಸೇನ್ ಅವರು ‘ಅಲ್ಪಸಂಖ್ಯಾತ’ ಸಮುದಾಯಕ್ಕೆ ಸೇರಿದವರು ಎಂಬುದು ವಿಶೇಷತೆಗಳಲ್ಲಿ ಒಂದು ವಿಶೇಷ. ಕ್ಷೇತ್ರದ ಜನತೆ ಎರಡು ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ದೇಹಲಿ ಆಡಳಿತದಲ್ಲಿರುವ ಆಪ್ ಪಕ್ಷ ದೇಶಕ್ಕೆ ಮಾದರಿಯಾಗಿದೆ. ಈ ಆಡಳಿತದ ಚುಕ್ಕಾಣಿ ಹಿಡಿದಿರುವ ಕೇಜ್ರಿವಾಲ್ ಅವರ ಆಡಳಿತದ ಕಾರ್ಯವೈಖರಿಗಳನ್ನು ಮುಂದಿಟ್ಟುಕೊಂಡು, ಜನರ ಮುಂದೆ ತೆರಳುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಎರಡು ಪಕ್ಷಗಳ ದುರಾಡಳಿತ ಕಂಡು ಬೇಸತ್ತು ಹೋಗಿರುವ ಜನತೆ ಆಪ್ ಪ್ರಣಾಳಿಕೆಗೆ ಮನಸೋತು ಮತ ನೀಡಲಿದ್ದಾರೆ. ಕ್ಷೇತ್ರದ ಕೇಂದ್ರ ಸ್ಥಾನ ಯಲಬುರ್ಗಾ ಪಟ್ಟಣದಲ್ಲಿ ಜನಿಸಿ, ಇಲ್ಲಿಯೇ ವಿದ್ಯಾಭ್ಯಾಸಗೈದ ನನಗೆ ವಿಶೇಷ ಮತದಾರರು ಇದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿನ ನಿಷ್ಠಾವಂತ ಕಾರ್ಯಕರ್ತರು, ನಾಯಕರುಗಳ ಮಲತಾಯಿ ದೊರಣೆಗೆ ಮನನೊಂದಿದ್ದಾರೆ. ಈ ಎಲ್ಲಾ ಮನನೊಂದಿರುವವರು ಒಂದು ಪ್ರತ್ಯೇಕ ವೇದಿಕೆಗಾಗಿಯೇ ಕಾಯ್ದುಕುಳಿತಿದ್ದಾರೆ. ಈಗಾಗಲೇ ಬಹುತೇಕರು ನಮ್ಮ ಪಕ್ಷದ ಸಂಪರ್ಕದಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಕ್ಷೇತ್ರ ಆಪ್ ಪರವಾಗಲಿದೆ. ಪಕ್ಷದ ಕಚೇರಿ ಆರಂಭ ಸೇರಿದಂತೆ ಪ್ರಚಾರದ ರೂಪರೇಷೆಗಳನ್ನು ತಯಾರಿಸಲಾಗಿದೆ. ಶೀಘ್ರದಲ್ಲೇ ಜನರ ಬಳಿ ಹೋಗಿ, ಎರಡು ರಾಷ್ಟ್ರೀಯ ಪಕ್ಷಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು. ವಿಭಿನ್ನ ಹಾಗೂ ವಿಶಿಷ್ಟ ಆಡಳಿತ ನೀಡುವುದಕ್ಕೆ ಹೆಸರಾಗಿರುವ ಆಪ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ನನಗೆ ಮತ ನೀಡಿ, ಕ್ಷೇತ್ರದ ಬದಲಾವಣೆಗೆ ಮುನ್ನುಡಿ ಬರೆಯಬೇಕೆಂದು ‘ಕೃಷಿ ಪ್ರಿಯ’ ಪತ್ರಿಕೆಗೆ ಮೌಲಾಹುಸೇನ್ ಬುಲ್ಡಿಯಾರ್ ಮನವಿ ಮಾಡಿಕೊಂಡಿದ್ದಾರೆ..!!