‘ಕೃಷ್ಣಾ’ ನಿನ್ನನ್ನು ಕೊಪ್ಪಳಕ್ಕೆ ತಂದವರಾರು..?

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕೃಷ್ಣಾ.. ಕೃಷ್ಣಾ… ಎಂಬುದು ಕೊಪ್ಪಳ ಜಿಲ್ಲೆಯವರಿಗೆ ಕನವರಿಕೆ ಶಬ್ಧವಾಗಿಬಿಟ್ಟಿದೆ. ಕೃಷ್ಣಾ ತಂದಿದ್ದು ನಾವು ರೀ.. ಅಲ್ಲ ರೀ ನಾವು… ಕೃಷ್ಣನಿಗಾಗಿ ನೂರಾರು ಕಿ.ಮೀ ಪಾದಯಾತ್ರೆ ಮಾಡಿದ್ದು ನಾವು ರೀ. ತಾವು ಪಾದಯಾತ್ರೆ ಮಾಡಿರಬಹುದು. ಆದರೆ, ನಾವು ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದೆವೆ. ಅಲ್ಲರೀ.. ನಾವು ಮೊದಲು ಅಡಿಗಲ್ಲು ಹಾಕಿದ್ದು… ಅಡಿಗಲ್ಲು ಜೊತೆಗೆ ಯೋಜನೆ ಘೋಷಿಸಿದ್ದು ಮಾತ್ರ ನೀವು. ನಾವು ಘೋಷಣೆ ಜೊತೆಗೆ ಹಣ ನೀಡಿದ್ದೇವೆ ಎಂದು ಕೃಷ್ಣನನ್ನು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಕೊಪ್ಪಳದ ರಾಜಕಾರಣಿಗಳು ಬಣ್ಣಿಸಿದ್ದೆ ಬಣ್ಣಿಸಿದ್ದು..!

ಈ ಮೇಲಿನ ವಿವರಣೆ ನೀಡಿದ್ದು, ತ್ರೈತಾಯುಗದ ಕೃಷ್ಣ ಪರಮಾತ್ಮನ ಕಥೆಯಂತು ಮೊದಲು ಅಲ್ಲವೇ ಅಲ್ಲ. ಈಗಿನ ಆಧುನಿಕ (ಸಿಡಿ) ಕಥೆಯಂತು ಮೊದಲೇ ಅಲ್ಲ. ಇದು ಕಳೆದ ಹತ್ತು ವರ್ಷಗಳ ಕಾಲ ನಮ್ಮನ್ನಾಳಿದ ಕೊಪ್ಪಳ ಜಿಲ್ಲೆಯ ‘ಏತ ನೀರಾವರಿ ಯೋಜನೆಗೆ’ ಅನುದಾನ ಬಿಡುಗಡೆ ಸೇರಿದಂತೆ ಈ ಯೋಜನೆಗೆ ಅನುದಾನ ಬಿಡುಗಡೆಗೆ ಕಾರಣವಾಗಿರುವ ರಾಜಕೀಯ ಪಕ್ಷಗಳು ಮತ ಭೇಟಿಗಾಗಿ ಬಿಡುತ್ತಿರುವ ಬುರುಡೆ ಮಾತುಗಳು.


ಇಲ್ಲಿನವರಿಗೆ ಸಾಕಾಗಿ ಹೋಗಿದೆ : ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ಏತ ನೀರಾವರಿ ಮೂಲಕ ಕೃಷ್ಣಾ ನದಿಯಿಂದ ನೀರು ಹರಿಸುವುದಾಗಿ ಹೇಳುವುದು ಚುನಾವಣೆ ಸಮಯದಲ್ಲಿ ಮಾತ್ರ ಚರ್ಚೆ ಬಲು ಜೋರಾಗಿಯೇ ನಡೆದಿರುತ್ತದೆ. ಚುನಾವಣೆ ಬಂದಾಗ ಮಾತ್ರ ತರಾತುರಿಯಲ್ಲಿ ಅಡಿಗಲ್ಲು.. ಕೋಟಿಗಳ ರೂಪಾಯಿಗಳ ಘೋಷಣೆಗಳಿಂದ ಇಲ್ಲಿನವರು ಬೇಸತ್ತು ಹೋಗಿದ್ದಾರೆ. ಕೇಳಿದ್ದನ್ನ ಕೇಳಿ ಇಲ್ಲಿನವರಿಗೆ ಸಾಕಾಗಿ ಹೋಗಿರುವುದಂತು ಸತ್ಯ.

ಕೃಷ್ಣಾ ಹಿನ್ನೀರು ಪ್ರದೇಶದವರಿಗೆ ನೀರಿಲ್ಲ : ಕೃಷ್ಣಾ ನದಿ ನೀರಿಗಾಗಿ ಎಲ್ಲವನ್ನೂ ತ್ಯಾಗಕ್ಕೆ ಕಾರಣರಾದ ಕೃಷ್ಣಾ ಸಂತ್ರಸ್ತರಿಗೆ ಕೆಲವೊಮ್ಮೆ ಕುಡಿಯಲು ಹನಿ ನೀರಿಗಾಗಿ ಬರ ಎದುರಾಗಿದ್ದು ಸಾಮಾನ್ಯ. ಕೋಟ್ಯಂತರ ರೂಪಾಯಿಗಳನ್ನು ನೀಡಿ ಮಹಾರಾಷ್ಟ್ರದ ಕೊಯ್ನಾ ನದಿಯಿಂದ ಕೆಲ ಟಿಎಂಸಿ ನೀರು ಖರೀದಿಸಿದ ಪರಿಸ್ಥಿತಿಯಲ್ಲಿ ಅದು ದೂರದ ಕೊಪ್ಪಳ ಭಾಗದವರಿಗೆ ಮನೆ ಮನೆಗೆ ನೀರು.. ಇತ್ಯಾದಿ ಘೋಷಣೆ ಕೆಲವೊಮ್ಮೆ ಅಪಹಾಸ್ಯವಾಗಿ ಕಂಡು ಬರುತ್ತಿವೆ. ಅದಕ್ಕಾಗಿ ಇಲ್ಲಿನವರು “ಕೃಷ್ಣಾ … ಕೊಪ್ಪಳ ಜಿಲ್ಲೆಗೆ ನಿನ್ನನ್ನು ತಂದವರು ಯಾರು ತಂದೆ” ಎಂದು ವ್ಯಂಗ್ಯವಾಡುವುದು ಸಾಮಾನ್ಯ..!!