ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕಾಂಗ್ರೆಸ್ ಪಕ್ಷದ ಯಂಗ್ ಎಂಡ್ ಎನರ್ಜಟಿಕ್ ಲೀಡರ್ ರಾಹುಲ್ ಗಾಂಧಿ ಅವರು ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಜಿಲ್ಲೆಯ ಕುಷ್ಟಗಿ ಪಟ್ಟಣಕ್ಕೆ 28-04-2023 ರಂದು ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ..!
‘ಕೃಷಿ ಪ್ರಿಯ’ ಪತ್ರಿಕೆಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಮಧ್ಯಾಹ್ನ 3.35 ಕ್ಕೆ ಜಿಂದಾಲ್ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸುವ ರಾಹುಲ್ ಗಾಂಧಿ ಅವರು ಕುಷ್ಟಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದ ಮೂಲಕ ರೋಡ್ ಶೋ ನಡೆಸಲಿದ್ದಾರೆ. ಬಳಿಕ ತಾವರಗೇರಾ ರಸ್ತೆಯಲ್ಲಿನ ಹಾಲು ಶಿಥಿಲಿಕರಣ ಘಟಕದ ಆವರಣದಲ್ಲಿನ ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಬಯ್ಯಾಪೂರು ಅವರ ಪರ ಮತಯಾಚಿಸಲಿದ್ದಾರೆ. ಅಲ್ಲದೆ, ಮಹಿಳೆಯರ ಜೊತೆಗೆ ಮೀಸಲಾತಿ, ದರ ಹೆಚ್ಚಳ ಇತ್ಯಾದಿಗಳ ಕುರಿತು ಕೆಲ ಸಮಯ ಸಂವಾದ ನಡೆಸಲಿದ್ದಾರೆ. ಕುಷ್ಟಗಿ ಕಾರ್ಯಕ್ರಮದ ಬಳಿಕ ಅದೇ ಹೆಲಿಕ್ಯಾಪ್ಟರ್ ಮೂಲಕ ಜಿಂದಾಲ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ವಿಶೇಷ ವಿಮಾನದೊಂದಿಗೆ ದೆಹಲಿ ತಲುಪಲಿದ್ದಾರೆ ಎಂಬ ಪ್ರವಾಸದ ಮಾಹಿತಿ ಇದೆ ಎಂದರು.
ಸ್ಥಳ ಪರಿಶೀಲನೆ : ರಾಹುಲ್ ಗಾಂಧಿ ಆಗಮನದ ಹಿನ್ನಲೆಯಲ್ಲಿ ಐಬಿಸಿ ವಿಶೇಷ ಅಧಿಕಾರಿಗಳಾದ ಪಾಂಡು ಹಾಗೂ ವಿನೋಧ ಸಾಗರ ಸೇರಿದಂತೆ ಜಿಲ್ಲೆಯ ಹಿರಿಯ ಪೊಲೀಸರು ಮತ್ತು ಎಐಸಿಸಿ ಖಾಸಗಿ ಭದ್ರತಾ ಸಿಬ್ಬಂದಿ ಕುಷ್ಟಗಿಗೆ ಆಗಮಿಸಿ, ಕಾರ್ಯಕ್ರಮದ ವೇದಿಕೆಯ ಸ್ಥಳ ಪರಿಶೀಲನೆ ನಡೆಸಿದರು. ಸೂಕ್ತ ರಕ್ಷಣೆಯ ಹಿನ್ನಲೆಯಲ್ಲಿ ವೇದಿಕೆ ಪರಿಪೂರ್ಣ ಮಾಹಿತಿಯನ್ನು ಸ್ಥಳೀಯ ವೇದಿಕೆ ನಿರ್ಮಾಣದ ಗುತ್ತಿಗೆದಾರರ ಜೊತೆಗೆ ಸುದೀರ್ಘ ಚರ್ಚೆ ನಡೆಸಿ, ಅಧಿಕಾರಿಗಳು ಮಾಹಿತಿ ಪಡೆದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವವಹಿಸಲು ಸ್ಥಳೀಯ ಕಾಂಗ್ರೆಸ್ ನಾಯಕರ ಜೊತೆಗೆ ಕೂಡಾ ವಿಚಾರ ವಿನಿಮಯ ಮಾಡಿಕೊಂಡ ಬಗ್ಗೆ ತಿಳಿದುಬಂದಿತು..!!