ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ವಾಲಿಬಾಲ್ ಕ್ರೀಡಾಪಟುಗಳು ಓಡಿಸ್ಸಾದ ಭುವನೇಶ್ವರ ಕ್ರೀಡಾಂಗಣದಲ್ಲಿ ಜರುಗಿದ ‘ಜಂಜಾಟಿಯ ಖೇಲ್ ಮಹೋತ್ಸವ-2023’ ಎಂಬ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಗಣನೀಯ ಸಾಧನೆಗೈದಿರುವುದು ವಿಶೇಷ..!
ಕರ್ನಾಟಕ ಮಹಿಳಾ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ ಕೊಪ್ಪಳ ತಾಲೂಕಿನ ತಿಗರಿ ಗ್ರಾಮದ ಅಂಜಲಿ ರಾಮಣ್ಣ ಕರಡಿ ಹಾಗೂ ಹಿರೇಸಿಂದೋಗಿ ಗ್ರಾಮದ ಇಂದುಮತಿ ಯಂಕಪ್ಪ ತಳವಾರ ಮತ್ತು ಯಲಬುರ್ಗಾ ತಾಲೂಕಿನ ಲಿಂಗಲಬಂಡಿಯ ಶಿಲ್ಪಾ ದೇವಪ್ಪ ಕಳ್ಳಿಮರದ ಈ ಮೂರು ಜನ ಕ್ರೀಡಾಪಟುಗಳು ಕೊಪ್ಪಳ ಕ್ರೀಡಾ ಶಾಲೆಯಲ್ಲಿ ಅಭ್ಯಾಸಗೈದಿರುವುದು ನಮ್ಮ ಹೆಮ್ಮೆಯ ಸಂಗತಿ. ಇದರಲ್ಲಿ ಈಗಾಗಲೇ ಅಂಜಲಿ ಎರಡು ಬಾರಿ ರಾಷ್ಟ್ರ ಮಟ್ಟದಲ್ಲಿ ಸ್ಥಾನಗಳಿಸಿದರೆ, ಇಂದುಮತಿ ಒಂದು ಬಾರಿ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಸ್ಥಾನಗಳಿಸಿದ್ದಾರೆ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮಿಂಚಿದ ಶಿಲ್ಪಾ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾಳೆ. ಇಂದುಮತಿ ಎಂಬ ಕ್ರೀಡಾಪಟು ‘ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ಮಗಳು’ ವಾಲಿಬಾಲ್ ಕ್ರೀಡೆಯಲ್ಲಿ ಅಪ್ರತಿಮ ಸಾಧನೆಮಾಡಿರುವುದು ಜಿಲ್ಲೆಯ ಕ್ರೀಡಾಪಟುಗಳಿಗೆ ಎಲ್ಲಿಲ್ಲದ ಹೆಮ್ಮೆ.
ಇಂದುಮತಿ
ಶಿಲ್ಪಾ ಕಳ್ಳಿಮರದ
ಅಂಜಲಿ
UNIVERSITY BLUES : ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಹೊಸ ಜೂರಟಗಿ ಗ್ರಾಮದ ಶಿವಕುಮಾರ ತಂದೆ ಮಲ್ಲೇಶಪ್ಪ ಹಾಗೂ ಕೊಪ್ಪಳ ತಾಲೂಕಿನ ಮುನಿರಾಬಾದ್ ಹುಲಿಗಿಯ ಮಂಜುನಾಥ ಹುಲಗಪ್ಪ ತಳವಾರ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಲಿಬಾಲ್ ಕ್ರೀಡೆಯಲ್ಲಿ ಎರಡು ಬಾರಿ ‘ಯುನಿವರ್ಸಿಟಿ ಬ್ಲೂ’ ಎಂಬುದು ಇವರ ಕ್ರೀಡಾ ಸಾಧನೆಯ ವಿಶೇಷ. ಅಲ್ಲದೆ, ಹುಲಗಿಯ ಅಶೋಕ ಹುಲಗಪ್ಪ ಕಾಯಿಗಡ್ಡಿ (ಮಂಜುನಾಥ ಸೇರಿದಂತೆ) ಹೊಸಪೇಟೆ ವಿಜಯನಗರ ಕಾಲೇಜನಲ್ಲಿ ಪದವಿ ಅಭ್ಯಾಸಗೈಯುತ್ತಿದ್ದಾರೆ. ಈ ಎಲ್ಲಾ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಮಾತ್ರ ತಮ್ಮ ಹೆಮ್ಮೆಯ ತರಬೇತಿದಾರ ಹುಲಿಗಿಯ ಸುರೇಶ ಯಾದವ (ಸೂರಿ) ಅವರನ್ನು ಎನ್ನ ಹೃದಯ ಮಂದಿರಲ್ಲಿ ಸ್ಮರಿಸುತ್ತಾರೆ.
ಶಿವುಕುಮಾರ
ಅಶೋಕ
ಮಂಜುನಾಥ ತಳವಾರ
ಬಿ.ಪಿ.ಈಡಿ ಪ್ರಶಿಕ್ಷಣಾರ್ಥಿ : ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಸಾಧನೆಗೈದ ಕ್ರೀಡಾಪಟುಗಳಲ್ಲಿ ಶಿವಕುಮಾರ ರಾಯಚೂರಿನ ವಿ.ಆರ್.ಟಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಪಿ.ಈಡಿ ಅಭ್ಯಾಸಕ್ಕಾಗಿ ‘ಹಮಾಲಿ’ ಜೀವನ ಮಾಡಿ ಜೀವನ ಸಾಗಿಸುತ್ತಿರುವ ಸುದ್ದಿ ಕೇಳಿ ಮೈ ಜುಮ್ಮ ಎನಿಸಿತು. ಇವರಲ್ಲದೆ, ಮಂಜುನಾಥ ತಳವಾರ ಕ್ರೀಡಾಪಟು ತಮ್ಮ ಹುಲಿಗಿ ಗ್ರಾಮದಲ್ಲಿ ಕಬ್ಬಿಣ ಹಾಲು ಮಾರಾಟ ಮಾಡಿದರೆ, ಅಶೋಕ ಕಾಯಿಗಡ್ಡಿ ಕ್ರೀಡಾಪಟು ಹುಲಿಗಿಯಲ್ಲಿ ಕಾಯಿಪಲ್ಲೆ ಮಾರಾಟವೇ ಇವರ ಮುಖ್ಯ ಉದ್ಯೋಗ ಆಗಿದೆ. ಈ ಮೂರು ಜನರ ರಾಷ್ಟ್ರ ಮಟ್ಟದ ಸಾಧನೆಗೆ ಇವರಿಗಿರುವ ಕಡು ಬಡತನ ಮಾತ್ರ ಅಡ್ಡಿಯಾಗಿಲ್ಲ. ದೈಹಿಕ ಶಿಕ್ಷಣದಲ್ಲಿ ಉನ್ನತ ವ್ಯಾಸಂಗದ ಕನಸಿನಲ್ಲಿರುವ ಪ್ರತಿಯೊಬ್ಬರು ಆರ್ಥಿಕ ನೆರವಿಗಾಗಿ ನಿತ್ಯ ಅಂಗಲಾಚುತ್ತಿದ್ದಾರೆ. ಆದರೆ, ನೆರವು ನೀಡಲು ರಾಜ್ಯದ ಸಂಘ ಸಂಸ್ಥೆಗಳು ಮುಂದೆ ಬರಬೇಕಾಗಿರುವುದು ಬಾಕಿ ಇದೆ.
ಅಭಿನಂದನೆ : ಕೊಪ್ಪಳ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ, ಅಧೀಕ್ಷಕ ಹೆಚ್. ನಾಗರಾಜ, ಖೋ ಖೋ ಕ್ರೀಡೆಯ ಜಿಲ್ಲಾ ತರಬೇತಿದಾರರಾದ ಎ.ಎನ್.ಯತಿರಾಜು, ವಾಲಿಬಾಲ್ ತರಬೇತಿದಾರರಾದ ಸುರೇಶ ಯಾದವ, ಕಮಲ್ ಸಿಂಗ್ ಬಿಸ್ತ್ ಸಿಬ್ಬಂದಿಗಳಾದ ತುಕಾರಾಂ ರಂಜಪಲ್ಲಿ ಮತ್ತು ಹನುಮೇಶ ಪೂಜಾರ ಸೇರಿದಂತೆ ಇನ್ನಿತರ ಸಿಬ್ಬಂದಿ ವರ್ಗವು ಈ ಕ್ರೀಡಾಪಟುಗಳ ಸಾಧನೆಗೆ ಅಭಿನಂದಿಸಿದ್ದಾರೆ..!!