ಓದುಗ ಪ್ರಭುಗಳೇ..,

 

ಶುಭೋದಯ..🍁🌺🍁🙏

ಕಳೆದು ಒಂದು ತಿಂಗಳಿನಿಂದ ತಮ್ಮ ಒಲುಮೆಯ “ಕೃಷಿಪ್ರಿಯ” ವೆಬ್ ನ್ಯೂಸ್ ಪತ್ರಿಕೆ ಪ್ರಸಾರ ಸ್ಥಗಿತಗೊಂಡಿದ್ದಕ್ಕೆ ವಿಷಾದಿಸುತ್ತೇವೆ. ತಿಂಗಳು ಹಿಂದೆ ಅಂದರೆ ಜುಲೈ 5ರಂದು ಈ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಶರಣಪ್ಪ ಕುಂಬಾರ ಅವರು ಅಕಾಲಿಕ ನಿಧನರಾದರು. ಈ ಹಿನ್ನೆಲೆ ಕೆಲ ಕಾರಣಾಂತರಗಳಿಂದ ಪತ್ರಿಕೆ ಪ್ರಸಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಬಡ ಕೃಷಿ ಕುಟುಂಬದಲ್ಲಿ ಹುಟ್ಟಿದರೂ ಹಲವು ಸಂಕಷ್ಟ ಸಾಹಸ ಎದುರಿಸಿದರೂ ಸಾಮಾಜಿಕ ಕಳಕಳಿಯ, ಸರಳ ಸಜ್ಜನಿಕೆ ವ್ಯಕ್ತಿತ್ವದ ದಿ.ಶರಣಪ್ಪ ಕುಂಬಾರ ಅವರು ಸುಮಾರು 25ಕ್ಕೂ ಹೆಚ್ಚು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಪತ್ರಿಕೆ ವಿತರಕರಾಗಿ, ಬಿಡಿ ಸುದ್ದಿಗಾರರಾಗಿ, ಜಿಲ್ಲಾ ವರದಿಗಾರರಾಗಿ, ಉಪ ಸಂಪಾದಕರಾಗಿ ಜಿಲ್ಲಾ, ರಾಜ್ಯ ಮಟ್ಟದ ಪತ್ರಿಕೆಗಳು ಹಾಗೂ ನ್ಯೂಸ್ ಚಾನೆಲ್’ಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ತಮ್ಮ ಬರವಣಿಗೆ ಮೂಲಕ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರಕ್ಕೆ ಕಾರಣರಾಗಿದ್ದಾರೆ. ಅಲ್ಲದೇ ಭ್ರಷ್ಟಾಚಾರ ಕೃತ್ಯಗಳಿಗೆ ಪರೋಕ್ಷವಾಗಿ ಕಡಿವಾಣ ಹಾಕಲು ಯತ್ನಿಸಿದ್ದಾರೆ. ಬಳಿಕ ಅವರ ಪತ್ರಿಕಾರಂಗ ಸ್ನೇಹಿತರು ಹಾಗೂ ಅಸಂಖ್ಯಾತ ಓದುಗರು ಹಂಚಿಕೊಂಡ ಅಭಿಪ್ರಾಯಗಳೇ ಸಾಕ್ಷಿ.

ಇಂತಹ ಸೃಜನಶೀಲ ವ್ಯಕ್ತಿ ನಮ್ಮನ್ನು ಅಗಲಿರುವುದು ತುಂಬಾ ನೋವು ಅನ್ನಿಸುತ್ತದೆ. ಆದರೆ, ಅವರು ನಮ್ಮನ್ನು ಭೌತಿಕವಾಗಿ ಅಗಲಿದ್ದರೂ ಅವರ ದೂರದೃಷ್ಟಿಯ ವಿಚಾರ ಹಾಗೂ ಧ್ಯೇಯಗಳೊಂದಿಗೆ ಕೆಲ ವರ್ಷಗಳಿಂದೆ ಆರಂಭಿಸಿದ್ದ ಹೆಮ್ಮೆಯ “ಕೃಷಿಪ್ರಿಯ ” ವೆಬ್ ನ್ಯೂಸ್ ಪತ್ರಿಕೆ ಯಾವುದೇ ಕಾರಣಕ್ಕೂ ನಿಲ್ಲಬಾರದಾಗಿದೆ. ಅವರ ಕನಸಿನ ಕೂಸು ಪತ್ರಿಕೆ ಹೆಮ್ಮರವಾಗಿ ಬೆಳೆಯಬೇಕು ಎಂಬ ಆಶಯದೊಂದಿಗೆ ಪುನಃ ಇಂದಿನಿಂದ ಆರಂಭಿಸಲಾಗುತ್ತಿದೆ. ಎಂದಿನಂತೆ ವಿಭಿನ್ನ ಬರಹಗಳ ಮೂಲಕ ನಿತ್ಯ ನೂತನವಾಗಿ ಪ್ರಸಾರವಾಗುವ ಈ ವೆಬ್ ನ್ಯೂಸ್ ಪತ್ರಿಕೆಗೆ ಸದಾ ತಮ್ಮ ಪ್ರೀತಿ, ಸಹಾಯ, ಸಹಕಾರಬೇಕಿದೆ.

ಧನ್ಯವಾದಗಳೊಂದಿಗೆ,

ನಾಗರತ್ನ ಶರಣಪ್ಪ ಕುಂಬಾರ
ಪ್ರಕಾಶಕರು
“ಕೃಷಿಪ್ರಿಯ”