ನೀರು ಅಮೂಲ್ಯ, ವ್ಯರ್ಥ ಮಾಡಬೇಡಿ: ಪಿಡಿಒ ಪ್ರಶಾಂತ ಹಿರೇಮಠ

 

 

ಮಹಾಂತೇಶ ಚಕ್ರಸಾಲಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ನೀರು ಅಮೂಲ್ಯವಾಗಿದ್ದು ವ್ಯರ್ಥ ಮಾಡಬಾರದು ಎಂದು ಹನುಮನಾಳ ಗ್ರಾಮ ಪಂಚಾಯಿತಿ ಪಿಡಿಒ ಪ್ರಶಾಂತ ಹಿರೇಮಠ ಅವರು ಹೇಳಿದರು.!

ಅವರು, ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಬಸ್ ನಿಲ್ದಾಣದಲ್ಲಿ ಜಿಪಂ, ತಾಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಲೆಸನ್ ಪ್ರತಿಷ್ಠಾನ ಕೊಪ್ಪಳ ಇವರ ಆಶ್ರಯದಲ್ಲಿ ಜಲಜೀವನ್ ಮಿಷನ್, ಸ್ವಚ್ಛ ಭಾರತ ಮಿಷನ್ ಯೋಜನೆ, ಮಳೆ ನೀರು ಕೊಯ್ಲು, ಬೂದು ನೀರು ನಿರ್ವಹಣೆ, ಸ್ವಚ್ಛ ಸಂಕೀರ್ಣ ಘಟಕ, ಬಯಲುಮುಕ್ತ ಬಹಿರ್ದೆಸೆ ಗ್ರಾಮ, ಕಾರ್ಯಾತ್ಮಕ ನಳ ಸಂಪರ್ಕ, ನೀರಿನ ಗುಣಮಟ್ಟ ಪರೀಕ್ಷೆ ಬಗ್ಗೆ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.

ಅಂತರ್ಜಲ ಹೆಚ್ಚಿಸುವ, ನೀರಿನ ಮೂಲಗಳನ್ನು ಸಂರಕ್ಷಿಸುವಲ್ಲಿ ಜನತೆ ಸರ್ಕಾರದ ಯೋಜನೆಗಳೊಂದಿಗೆ ಕೈಜೋಡಿಸಬೇಕು. ವೈಯಕ್ತಿಕ ಶೌಚಗೃಹ, ಇಂಗುಗುಂಡಿ ನಿರ್ಮಿಸಿಕೊಳ್ಳುವಲ್ಲಿ ಪ್ರತಿ ಕುಟುಂಬ ಹಿತಾಸಕ್ತಿ ತೋರಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಜಲಜೀವನ್ ಮಿಷನ್’ನ ರವಿ ಗುಡ್ಡದಮೇಗಳ
ಮಾತನಾಡಿ, ನೀರಿನ ಗುಣಮಟ್ಟ ನಿರ್ವಹಣೆ, ಜಲಮೂಲ ರಕ್ಷಣೆ, ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಗಳ ರಚನೆ, ಪ್ರತಿಯೊಬ್ಬರಿಗೂ ಪ್ರತಿದಿನ 55 ಲೀಟರ್‌ನಷ್ಟು ನೀರನ್ನು ಒದಗಿಸುವ ರೀತಿ ಹಾಗೂ ಪೂರ್ಣಗೊಂಡ ಜೆಜೆಎಂ ಕಾಮಗಾರಿಗಳಲ್ಲಿ ಅಳವಡಿಸಿರುವ ಪೈಪ್ಲೈನ್, ನಲ್ಲಿ, ಮೀಟರ್’ಗಳ ಗುಣಮಟ್ಟತೆ ಕುರಿತು ವಸ್ತುಗಳನ್ನು ಪ್ರದರ್ಶಿಸುವ ಮೂಲಕ ವಿವರಿಸಿದರು.

 

ಗ್ರಾಮಸ್ಥರು ವಸ್ತು ಪ್ರದರ್ಶನದಲ್ಲಿ ಪ್ರತಿಯೊಂದು ವಸ್ತುಗಳನ್ನು ವೀಕ್ಷಿಸಿ ಅವುಗಳ ಸಂಪೂರ್ಣ ಮಾಹಿತಿ ಪಡೆದುಕೊಂಡರು.

ಈ ವೇಳೆ ಗ್ರಾ.ಪಂ. ಸರ್ವ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.!!