ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಲೋಕಸಭಾ ಚುನಾವಣೆ ಸಮೀಕ್ಷೆ ನೆಪದಲ್ಲಿ ಭಾರತದ ಪ್ರತಿಷ್ಠಿತ ಖಾಸಗಿ ನ್ಯೂಸ್ ಚಾನೆಲ್ ಹೆಸರು ಹೇಳಿಕೊಂಡು ಜಿಲ್ಲೆಯ ಕುಷ್ಟಗಿ ಪಟ್ಟಣಕ್ಕೆ ಅನಧಿಕೃತವಾಗಿ ಆಗಮಿಸಿದ್ದ ಯುವಕರ ತಂಡವನ್ನು ಪೊಲೀಸರು ವಿಚಾರಣೆ ನಡೆಸಿದ ಪ್ರಸಂಗ ಭಾನುವಾರ ಜರುಗಿತು.!
ಪಟ್ಟಣದ ಕೆಲ ವಾರ್ಡಗಳಲ್ಲಿ ಒಬ್ಬೊಬ್ಬರಾಗಿ ಸಂಚರಿಸಿದ ಯುವಕರ ತಂಡ ಕೆಲ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರ ಹೆಸರು ಅವರ ಮೊಬೈಲ್ ಸಂಖ್ಯೆ ಪಡೆದು, ಯಾವ ರಾಜಕೀಯ ಪಕ್ಷಗಳಿಗೆ ಬೆಂಬಲಿಸುತ್ತೀರಿ ಎಂಬ ವಯಕ್ತಿಕ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ. ಜೊತೆಗೆ
ಸಮೀಕ್ಷೆ ನಡೆಸಲು ಬಂದವರು, ಒಂಟಿ ಮಹಿಳೆ ಇದ್ದ ಮನೆಗಳನ್ನು ಆಯ್ಕೆ ಮಾಡಿಕೊಂಡು ಅಥವ ರಸ್ತೆಯಲ್ಲಿ ಸಂಚರಿಸುವ ಒಂಟಿ ಮಹಿಳೆಯರನ್ನೆ ಗುರಿಯಾಗಿಸಿಕೊಂಡು ಮಾತುಕತೆಗೆ ಪ್ರಯತ್ನಿಸಿದ್ದಾರೆ. ಇದರಿಂದ ಭಯಗೊಂಡ ಕೆಲ ಮಹಿಳೆಯರು ಮಾಹಿತಿ ನೀಡುವಲ್ಲಿ ಹಿಂಜರಿದಿದ್ದಾರೆ.
ಇದನ್ನು ಗಮನಿಸಿದ ಪ್ರಜ್ಞಾವಂತ ಸಾರ್ವಜನಿಕರು, ಅನುಮಾನಸ್ಪದ ತಿರುಗಾಡುತ್ತಿದ್ದ ಕೆಲ ಯುವಕರನ್ನು ತಡೆದು ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಅಥವಾ ತಾಲೂಕಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಪರವಾನಗಿ ಪಡೆದಿದ ಬಗ್ಗೆ ವಿಚಾರಿಸಿದ್ದಾರೆ. ಆಗ ಸಮರ್ಪಕವಾಗಿ ಉತ್ತರಿಸದೇ ಯುವಕರು ಕಾಲ್ಕಿತ್ತಿದ್ದಾರೆ.
ಕೆಲ ತಿಂಗಳುಗಳಿಂದ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಮೊದಲೇ ದಿಗಿಲುಗೊಂಡಿರುವ ಸಾರ್ವಜನಿಕರು, ಈ ಕುರಿತು ಪೊಲೀಸರ ಗಮನಕ್ಕೆ ತಂದಿದ್ದಾರೆ. ಆಗ ಸ್ಥಳೀಯ ಪೊಲೀಸರು ಕಾರ್ಯಪ್ರೌವೃತ್ತರಾಗಿ ಕಾರು ಸಮೇತ ಎಂಟು ಜನ ಯುವಕರ ಗುಂಪು ಪತ್ತೆ ಮಾಡಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.
ಆದರೆ, ಪ್ರತಿಷ್ಠಿತ ಖಾಸಗಿ ಮೀಡಿಯಾ ಸಂಸ್ಥೆಯೊಂದರ ಹೆಸರು ಹೇಳಿಕೊಂಡಿದ್ದಾರೆ., ಚುನಾವಣಾ ಸಮೀಕ್ಷೆಯ ಯಾವುದೇ ಪರವಾನಿಗೆ ಪಡೆದಿಲ್ಲ ಎಂದು ಬಾಯಿ ಬಿಟ್ಟಿದ್ದಾರೆ. ಬಳಿಕ ಪರವಾನಗಿಯಿಲ್ಲದೆ ಪಟ್ಟಣದಲ್ಲಿ ಸಮೀಕ್ಷೆ ನಡೆಸುವಂತಿಲ್ಲ ಎಂದು ತಾಕೀತು ಮಾಡಿ ಕಳುಹಿರುವುದಾಗಿ ಪಿಎಸ್’ಐ ಮುದ್ದುರಂಗಸ್ವಾಮಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.!!