ಕೆರೆ ತುಂಬಿಸುವ ಪ್ರಾಯೋಗಿಕ ಕಾರ್ಯ ಪರಿಶೀಲಿಸಿದ ಶಾಸಕ ಡಿ.ಎಚ್.ಪಾಟೀಲ್!

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಆಲಮಟ್ಟಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಣೆ ಹಿನ್ನೆಲೆ ಜಿಲ್ಲೆಯ ಕುಷ್ಟಗಿ ತಾಲೂಕಿನ 18 ಕೆರೆಗಳ ತುಂಬಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಶಾಸಕ ದೊಡ್ಡನಗೌಡ ಪಾಟೀಲ್ ಅವರು ಭಾನುವಾರ ಪರಿಶೀಲಿಸಿದರು.

ಬಳಿಕ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳಿಂದ ಪ್ರಗತಿ ಹಂತದ ಮಾಹಿತಿ ಪಡೆದು ತ್ವರಿತವಾಗಿ ಕೆರೆಗಳಿಗೆ ನೀರು ಬಿಡುವ ಪ್ರಾಯೋಗಿಕ ಪರೀಕ್ಷೆ ಕಾರ್ಯ ಮುಗಿಸಿ ಕೆರೆಗಳನ್ನು ತುಂಬಿಸಿ ಎಂದು ಸೂಚಿಸಿದರು.

ಈ ಕುರಿತು ಮಾಹಿತಿ ನೀಡಿದ ಕೃಷ್ಣ ಭಾಗ್ಯ ಜಲ ನಿಗಮದ ಜೆಇ ರಮೇಶ ನೆಲಗಿ ಅವರು, ತಮ್ಮ ವ್ಯಾಪ್ತಿಗೆ ಒಳಪಡುವ ಮೊದಲನೇ ಹಂತದ ಕೆರೆ ತುಂಬಿಸುವ ಯೋಜನೆಯ ಏಳು ಕೆರೆಗಳಲ್ಲಿ ಮುಖ್ಯ ಪೈಪ್ಲೈನ್ ವ್ಯಾಪ್ತಿಯಲ್ಲಿ ಬರುವ ಚಳಗೇರಾ ಹಾಗೂ ಹಿರೇನಂದಿಹಾಳ ಕೆರೆಗಳಿಗೆ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ ನೀರು ಬಿಟ್ಟಿರುವುದು ಯಶಸ್ವಿಯಾಗಿದೆ. ಇನ್ನುಳಿದ ಕೊರಡಕೇರಾ, ಶಾಖಾಪೂರ ಕೆರೆಗಳಿಗೆ ನೀರು ಬಿಡುವ ಪ್ರಾಯೋಗಿಕ ಕಾರ್ಯ ಇನ್ನೊಂದು ವಾರದಲ್ಲಿ ಮುಗಿಯಲಿದೆ ಎಂದು ತಿಳಿಸಿದರು.

ಕೃಷ್ಣ ಭಾಗ್ಯ ಜಲ ನಿಗಮದ ಮತ್ತೊಬ್ಬ ಅಧಿಕಾರಿ ಅಶೋಕ ನಾಯಕ ಎಂಬುವರು ಮಾಹಿತಿ ನೀಡಿ, ತಮ್ಮ ವ್ಯಾಪ್ತಿಯ ಎರಡನೇ ಹಂತದ ಹನ್ನೊಂದು ಕೆರೆಗಳಲ್ಲಿ ಬೀಳಗಿ ಕೆರೆ, ಯಲಬುಣಚಿ ಕೆರೆ, ಕಬ್ಬರಗಿ, ಕಾಟಾಪೂರು, ಹೂಲಗೇರಿ, ಕೊಡತಗೇರಿ, ರಾಂಪುರ, ನಿಲೋಗಲ್, ದೇವಲಾಪುರ ಕೆರೆಗಳಿಗೆ ನೀರು ಬಿಡುವ ಪ್ರಾಯೋಗಿಕ ಕಾರ್ಯ ನಿರಂತರ ನಡೆಯುತ್ತಿದೆ. ಕಳೆದ ವರ್ಷ ಬೇಸಿಗೆ ದಿನಗಳಲ್ಲಿ ಯಲಬುಣಚಿ ಕೆರೆಗೆ ನೀರು ಬಿಡುವ ಪ್ರಾಯೋಗಿಕ ಕಾರ್ಯ ಮಾಡಲಾಗಿತ್ತು. ಡ್ಯಾಂಅಲ್ಲಿ ನೀರು ಲಭ್ಯವಿಲ್ಲದರ ಕಾರಣ ಕೆರೆಗಳಿಗೆ ನೀರುಬಿಡಲು ಆಗಿದ್ದಿಲ್ಲ. ಸಧ್ಯ ನೀರು ಲಭ್ಯವಾಗಿರುವುದರಿಂದ ಪೈಪ್ಲೈನ್ ಮೂಲಕ ನೀರು ಬಿಡುವ ಪ್ರಾಯೋಗಿಕ ಕಾರ್ಯ ನಿರಂತರ ನಡೆದಿದೆ ಎಂದು ಕೃಷಿ ಪ್ರಿಯ ಪತ್ರಿಕೆಗೆ ತಿಳಿಸಿದರು.

ಕಳೆದ ವರ್ಷ ಮೊದಲ ಬಾರಿಗೆ ಯಲಬುಣಚಿ ಕೆರೆಗೆ ಪ್ರಾಯೋಗಿಕವಾಗಿ ನೀರು ಬಿಟ್ಟಾಗ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಗಂಗೆ ಪೂಜೆ ನೆರವೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂದು ಭಾನುವಾರ ನೂತನ ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಅವರು ಕಲಾಲಬಂಡಿ ಪಂಪಹೌಸ್’ಗೆ ಭೇಟಿ ನೀಡಿ ಪ್ರಾಯೋಗಿಕ ಕಾರ್ಯಕ್ಕೆ ಮತ್ತೊಮ್ಮೆ ಚಾಲನೆ ನೀಡಿದರು. ಬಳಿಕ ಚಳಗೇರಾ ಹಾಗೂ ಹಿರೇನಂದಿಹಾಳ ಕೆರೆಗಳಿಗೆ ತೆರಳಿ ವೀಕ್ಷಣೆ ಮಾಡಿದರು.

ಸಮರ್ಪಕವಾಗಿ ಮಳೆಯಿಲ್ಲದೆ ತಾಲೂಕಿನ ರೈತರು ಜಾನುವಾರುಗಳಿಗೆ ನೀರಿನ ಕೊರತೆ ನೀಗಿಸಲು ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಕೆರೆ ತುಂಬಿಸುವ ಪ್ರಾಯೋಗಿಕ ಪರೀಕ್ಷೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿರುವುದಂತು ಸತ್ಯ.!!