ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ: ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಖರೀದಿಸಲು ಹಿಂಜರಿಯುತ್ತಿರುವ ಟೊಮೆಟೊ ಅನ್ನು ಬೆಳೆದ ರೈತರು ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.!
ಇವರಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ರೈತ ಹನುಮಂತಪ್ಪ ಭಜಿ ಕೂಡ ಒಬ್ಬರು. ಕಳೆದ ಕೆಲ ದಿನಗಳಿಂದ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 150 ರಿಂದ 200 ರೂಪಾಯಿ ಬೆಲೆ ಇದ್ದು, ಪ್ರತಿನಿತ್ಯ ಸುಮಾರು 10 ರಿಂದ 15 ಬುಟ್ಟಿ ಟೊಮೆಟೊ ಮಾರಿ ಅಂದಾಜು 3.5 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.
ರೈತ ಹನುಮಂತಪ್ಪ ಭಜಿ 3.5 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಪತ್ನಿ ಹನುಮವ್ವ ಹಾಗೂ ತನ್ನ ಮಕ್ಕಳ ಸಹಕಾರದಿಂದ 30 ಗುಂಟೆ ಜಮೀನಿನಲ್ಲಿ ಟೊಮೆಟೊ ಕೃಷಿ ಮಾಡಿದ್ದರು. ಮೊದ ಮೊದಲಿಗೆ ಟೊಮೆಟೊ ಬೆಲೆ ಕಡಿಮೆ ಇದ್ದಾಗ ಸುಮಾರು 25 ಕೆ.ಜಿ. ಬುಟ್ಟಿಗೆ ಕೇವಲ 120 ರಿಂದ 150 ರೂಪಾಯಿಗೆ ಮಾರಾಟವಾಗುತಿತ್ತು. ಇದರಿಂದ ರೈತ ತುಂಬಾ ನಷ್ಟ ಅನುಭವಿಸಬೇಕಾಯಿತು. ಬಳಿಕ 20 ಗುಂಟೆರಷ್ಟು ಟೊಮೆಟೊ ಬೆಳೆಯನ್ನು ಕಿತ್ತೆಸೆದು ಹತ್ತು ಗುಂಟೆ ಮಾತ್ರ ಬೆಳೆ ಉಳಿಸಿಕೊಂಡಿದ್ದ. ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಿದ್ದು, ಅದೃಷ್ಟಕ್ಕೆ 10 ಗುಂಟೆ ಜಮೀನಿನಲ್ಲಿದ ಬೆಳೆವಣಿಗೆ ಹಂತದಲ್ಲಿದ್ದ ಟೊಮೆಟೊ ಸದ್ಯ ಆದಾಯ ತರುತ್ತಿದೆ.
ಹನುಮಂತಪ್ಪ ಭಜಿ ಮಾತನಾಡಿ, ‘ಈಗ ಒಂದು ಬುಟ್ಟಿ (ಕ್ರೇಟ್) ಟೊಮೆಟೊಗೆ 2000 ರೂ.ಗಳ ವರೆಗೆ ದರವಿದೆ. ವಾರದಲ್ಲಿ ನಾಲ್ಕು ದಿನ ಟೊಮೆಟೊ ಕತ್ತರಿಸಲಾಗುತ್ತಿದೆ. ದಿನಕ್ಕೆ 2 ರಿಂದ 2.5 ಕ್ವಿಂಟಾಲ್ ಟೊಮೆಟೊ ಮಾರಾಟ ಮಾಡಿ ಸುಮಾರು 3.5 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದೇನೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ.
ಹನುಮಂತಪ್ಪ ಬಜಿ ಅವರ ಸಂಪಾದನೆಯನ್ನು ಗಮನಿಸಿ ಆಸೆಪಟ್ಟು ನಿಡಶೇಸಿ ಭಾಗದ ಬಹುತೇಕ ರೈತರು ಟೊಮೆಟೊ ಕೃಷಿಗೆ ಮುಂದಾಗಿದ್ದಾರೆ. ಆದರೆ, ಇದೇ ಬೆಲೆ ಮುಂದೆ ಇರಲಿದೆಯೋ ಎಂಬುದು ಗೊತ್ತಿಲ್ಲ.
ಈ ಮುಂಚೆ ಟೊಮೇಟೊ ಬೆಲೆ ಇಳಿಕೆಯಿಂದಾಗಿ ರೈತರು ರಸ್ತೆಗೆ ಟೊಮೆಟೊ ಚೆಲ್ಲಿ ಕೈಸುಟ್ಟುಕೊಂಡಿದ್ದರು. ಒಟ್ಟಾರೆ, ಪ್ರಸ್ತುತ ಪ್ರಕೃತಿ ವಿಕೋಪಕ್ಕೆ ಸಿಲುಕಿ ಪರದಾಡುತ್ತಿರುವ ರೈತ ಸಮುದಾಯಕ್ಕೆ ಟೊಮೆಟೋ ಬೆಳೆದು ಆರ್ಥಿಕವಾಗಿ ಸ್ವಲ್ಪ ಸಮಾಧನ ತಂದಿರುವುದಂತು ಸತ್ಯ.!!