ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಸರ್ಕಾರದ ಉಚಿತ ಯೋಜನೆಗಳನ್ನು ಪಡೆದುಕೊಳ್ಳಲು ನಾಮುಂದು ತಾಮುಂದು ಎಂದು ಮುಗಿಬೀಳುವ ಇಂದಿನ ದಿನಮಾನಗಳಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಶಿವಮ್ಮ ಸಜ್ಜನ್ ಎಂಬ ಇಳಿ ವಯಸ್ಸಿನ ಅಜ್ಜಿ, ರಾಜ್ಯ ಸರ್ಕಾರ ಇತ್ತೀಚೆಗೆ ಅನುಷ್ಠಾನಕ್ಕೆ ತಂದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ದೊರೆಯುವ 2000 ರೂಪಾಯಿಗಳನ್ನು ನಯವಾಗಿ ತಿರಸ್ಕರಿಸಿರುವುದು ವಿಶೇಷ.
ನಿಡಶೇಸಿ ವ ಗೆಜ್ಜೆಬಾವಿ ಶ್ರೀಮಠದ ಈ ಹಿಂದಿನ ಲಿಂ. ಶ್ರೀಚನ್ನಬಸವೇಶ್ವರ ಮಹಾಸ್ವಾಮಿಗಳು ತಮ್ಮ ಗುರುಗಳಾಗಿದ್ದು, ಅವರ ಆಶೀರ್ವಾದ, ಅವರ ನಾಮ ಸ್ಮರಣೆಯಿಂದ ನನ್ನ ಜೀವನ ಸೌಖ್ಯವಾಗಿದೆ. ಸಂತೃಪ್ತಳಾಗಿದ್ದೇನೆ. ಅನ್ಯದ ಹಣ ಎನಗೆ ಸಲ್ಲದು, ಅದನ್ನು ಪಡೆದರೆ ಗುರುಮೆಚ್ಚನು. ಹಣ ನೀಡಲು ಬರುವ ರಾಜಕೀಯ ನಾಯಕರನ್ನು ನನ್ನ ಮನೆ ಬಾಗಿಲೊಳಗೆ ಬಿಟ್ಟುಕೊಳ್ಳದವಳು ನಾನು. ಗೃಹಲಕ್ಷ್ಮೀ ಯೋಜನೆಯ ಉಪಯೋಗ ಪಡೆಯುವುದಿಲ್ಲ ಎಂದು ಶಿವಮ್ಮಜ್ಜಿ ತಿಳಿಸಿದ್ದಾಳೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಸಾರ್ವಜನಿಕ ಸಹಭಾಗಿತ್ವದಲ್ಲಿ ತಾಲೂಕಿನ ಮದಲಗಟ್ಟಿ ಗ್ರಾಮದ ಬಳಿಯ ನಿಡಶೇಸಿ ಕೆರೆ ಪುನಶ್ಚೇತನ ಕಾರ್ಯಕ್ಕೂ ಶಿವಮ್ಮಜ್ಜಿ ತಾನು ದುಡಿದು ಸಂಪಾದಿಸಿ ಕೂಡಿಟ್ಟ ಹಣವನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬೇಕು. ಸದಾ ಬಸವ ತತ್ವ ಪಾಲಿಸುವ ಈ ಅಜ್ಜಿ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ.
ಪ್ರಚಾರದಾಸೆಗೆ ಸಮಾಜ ಸೇವೆಯೇ ನಮ್ಮ ಧ್ಯೇಯ ಎಂಬ ಮುಖವಾಡ ತೊಡುವ ಇಂದಿನ ಸಮಾಜದಲ್ಲಿ ಶಿವಮ್ಮ ಅಜ್ಜಿಯಂತಹ ನಿಸ್ವಾರ್ಥ ಜೀವಗಳು ಇಂದಿಗೂ ನಮ್ಮೊಡನೆ ಇರುವುದು ಮಾದರಿ ಎನ್ನಬಹುದು.