ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಪ್ರಯಾಣಿಕರು ಹಾಗೂ ಸಾರಿಗೆ ಬಸ್ ನಿರ್ವಾಹಕರು ಪ್ರತಿನಿತ್ಯ ಎದುರಿಸುತ್ತಿರುವ ಚಿಲ್ಲರೆ ಸಮಸ್ಯೆಯನ್ನು ತಪ್ಪಿಸಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಹೌದು, ಚಿಲ್ಲರೆ ಸಮಸ್ಯೆಯಿಂದ ಮುಕ್ತಿ ಹೊಂದಲು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ವಿನೂತನ ಪ್ರಯೋಗ ನಡೆಸಿದ್ದಾರೆ. ಸಂಸ್ಥೆಯ ಆಯ್ದ ಬಸ್ಸುಗಳಲ್ಲಿ ಪ್ರಾಯೋಗಿಕವಾಗಿ QR Code ಮೂಲಕ ಟಿಕೆಟ್ ಖರೀದಿಸಲು ಪ್ರಯಾಣಿಕರಿಗೆ ಅವಕಾಶ ಕೊಟ್ಟಿದ್ದಾರೆ.
ಬಸ್ಸುಗಳಲ್ಲಿ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ಟಿಕೇಟ್ ಖರೀದಿಯ ಚಿಲ್ಲರೆ ವಿಷಯದಲ್ಲಿ ಕಿರಿಕಿರಿ ಉಂಟಾಗಿ ಅನಗತ್ಯವಾಗಿ ಬಸ್ ಪ್ರಯಾಣ ಸಮಯ ಪಾಲನೆ ಕಷ್ಟವಾಗುತಿತ್ತು. ಹೀಗಾಗಿ ಚಿಲ್ಲರೆ ಸಮಸ್ಯೆ ತಪ್ಪಿಸಲು ಅಧಿಕಾರಿಗಳು ಈ ಮಾರ್ಗೋಪಾಯ ಹುಡುಕಿದ್ದು, ಸದ್ಯ ಕೆಲ ಮಾರ್ಗದ ಬಸ್ಸುಗಳಲ್ಲಿ ಮಾತ್ರ QR Code ಮೂಲಕ ಟಿಕೆಟ್ ಖರೀದಿಸಿ ಪ್ರಯಾಣಿಸಲು ಅವಕಾಶ ಆರಂಭಿಸಿದ್ದಾರೆ.
ಈ ವಿನೂತನ ಪ್ರಯೋಗ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲೂ ಜಾರಿಯಾಗಲಿದೆ ಎನ್ನುತ್ತಾರೆ ಜಿಲ್ಲೆಯ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕುಷ್ಟಗಿ ಘಟಕದ ವ್ಯವಸ್ಥಾಪಕ ಜಡೇಶ್ ಬಿ.ಜಿ.
ಫೋಟೋ ಕೃಪೆ : ಅಂತರ್ಜಾಲ
