ಮಾನವೀಯತೆ ಮೆರೆದ ಸಾರಿಗೆ ಬಸ್ ಚಾಲಕ-ನಿರ್ವಾಹಕರು..!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಬಸ್ ಸಂಚಾರ ವೇಳೆ ಪ್ರಯಾಣಿಕನೊಬ್ಬ ತೀವ್ರ ಅಸ್ವಸ್ಥನಾದಾಗ ಕೂಡಲೇ ಸಾರಿಗೆ ಸಂಸ್ಥೆಯ ಚಾಲಕ-ನಿರ್ವಾಹಕ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಪ್ರಸಂಗ ಕುಷ್ಟಗಿ ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಪಟ್ಟಣದ ಸಾರಿಗೆ ಸಂಸ್ಥೆಯ ಕೇಂದ್ರೀಯ ಬಸ್ ನಿಲ್ದಾಣದಿಂದ ಕುಷ್ಟಗಿ ಘಟಕಕ್ಕೆ ಸೇರಿದ ಬಸ್, ಹನುಮಸಾಗರ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್ಸಿನಲ್ಲಿ ಪ್ರಯಾಣಿಕ ಕಾವಿಧಾರಿ ಬಸವರಾಜ ಸ್ವಾಮಿ ತಳುವಗೇರಾ ಎಂಬುವವರು ಮೂರ್ಚೆ ಬಂದು ಅಸ್ವಸ್ಥರಾಗಿದ್ದಾರೆ. ಕೂಡಲೇ ಬಸ್ ಚಾಲಕ ಬಸವರಾಜ ಅಕ್ಕಿ ನಿರ್ವಾಹಕನಿಗೆ ವಿಷಯ ತಿಳಿಸಿ ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದಾರೆ. ಪ್ರಯಾಣಿಕನಲ್ಲಿ ಚೇತರಿಕೆ ಬಾರದಿದ್ದಾಗ ಅವರು ಎಚ್ಚೆತ್ತು ಕೂಡಲೇ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಬಸ್ ಅನ್ನು ಚಲಾಯಿಸಿಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಿಸಲು ನೆರವಾಗಿದ್ದಾರೆ.

ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಬಸ್ಸಿನ ಪ್ರಯಾಣಿಕರು ಚಾಲಕ – ನಿರ್ವಾಹಕರ ಮಾನವೀಯತೆಯನ್ನು ಕೊಂಡಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಕೃಷಿಪ್ರಿಯ ಪ್ರತಿನಿಧಿಗೆ ತಿಳಿಸಿದ್ದಾರೆ.