ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅಮರಶಿಲ್ಪಿ ಜಕಣಾಚಾರಿಯಿಂದ ನಿರ್ಮಿಸಲಾಗಿದೆ ಎನ್ನಲಾದ ಉದ್ಭವ ಲಿಂಗು ರೂಪದ ಮಲ್ಲಯ್ಯ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ ಅಸಂಖ್ಯಾತ ಭಕ್ತರ ಪಾಲಿಗೆ ಆರಾಧ್ಯ ದೈವ.
ಪ್ರಕೃತಿಯ ಹಸಿರು ಸೆರಗಿನಲ್ಲಿ ಬೆಟ್ಟದ ತಪ್ಪಲಿನಡಿ ಬರುವ ಸರೋವರದ ಬಳಿಯಲ್ಲಿ ನೆಲೆಸಿರುವ ಲಿಂಗ ಸ್ವರೂಪಿ ಮಲ್ಲಯ್ಯನಿಗೆ ತಾವರೆಗಳೇ ಅರಳಿ ಪೂಜೆಗೆ ನಿಂತಿರುವ ಹಾಗೆ ಭಾಸವಾಗುತ್ತದೆ. ದೇವರ ದರ್ಶನಕ್ಕೆ ಬರುವ ಭಕ್ತರನ್ನು ಮೈಮರೆತು ನಿಲ್ಲುವಂತೆ ಮಾಡುವ ಇಲ್ಲಿನ ಪ್ರಕೃತಿ ಸೊಬಗು ಕಣ್ಮನ ಸೆಳೆಯುತ್ತವೆ.
ಕುಷ್ಟಗಿ ತಾಲೂಕಿನಲ್ಲಿರುವ ಐತಿಹಾಸಿಕ ಅಚನೂರು ಮಲ್ಲಯ್ಯ ದೇವಸ್ಥಾನ ತಾಲೂಕು ಕೇಂದ್ರದಿಂದ ಸುಮಾರು 50 ಕಿ.ಮೀ. ದೂರಲ್ಲಿದೆ. ಅಲ್ಲಿಗೆ ತೆರಳಬೇಕಾದರೆ ಸರಿಸುಮಾರು ಒಂದು ಗಂಟೆ ಸಮಯ ಬೇಕಾಗುತ್ತದೆ. ಕುಷ್ಟಗಿಯಿಂದ ಬಾದಾಮಿಗೆ ತೆರಳುವ ರಾಜ್ಯ ಹೆದ್ದಾರಿ ಮೂಲಕ ಹನುಮಸಾಗರ, ಹನುಮನಾಳ ಮಾರ್ಗವಾಗಿ ನಿಲೋಗಲ್ ಗ್ರಾಮಕ್ಕೆ ತೆರಳಬೇಕು. ಅಲ್ಲಿಂದ ಕೇವಲ 3 ಕಿ.ಮೀ. ದೂರದ ಅಂಕುಡೊಂಕು ರಸ್ತೆ ಕ್ರಮಿಸಿದರೆ ಸಾಕು ಬೆಟ್ಟದ ತಪ್ಪಲಿನಡಿ ಬೃಹದಾಕಾರದ ಕೆರೆ ತಟದಲ್ಲಿ ಅಚನೂರಿನ ಶ್ರೀಮಲ್ಲಯ್ಯಸ್ವಾಮಿ ದೇವಸ್ಥಾನ ಕಾಣಸಿಗುತ್ತದೆ.
ಮೊದಲಿಗೆ ಎದುರಾಗುವ ಮುದಿ ಮಲ್ಲಯ್ಯ ಕರೆಯಲ್ಪಡುವ ಬಾಗಿದ ಬೃಹದಾಕಾರದ ಬಂಡೆ, ಬಳಿಕ ಹದಿಮೂರು ಅಂಕಣದ ಕಲ್ಲಿನ ಮುಖ ಮಂಟಪ ಭಕ್ತರನ್ನು ಸ್ವಾಗತಿಸುತ್ತದೆ. ನಂತರ ಪೂರ್ವಕ್ಕೆ ಮುಖಮಾಡಿರುವ ಪುರಾತನ ಶ್ರೀಮಲ್ಲಯ್ಯ ಸ್ವಾಮಿಯ ದೇವಸ್ಥಾನ ದರ್ಶನ ನೀಡುತ್ತದೆ. ಗುಡಿಗೆ ಹೊಂದಿಕೊಂಡು ಉತ್ತರದ ಕಡೆಗೆ ಆಂಜನೇಯ, ನಾಗದೇವತೆ, ಗಣಪತಿ, ಲಕ್ಷ್ಮೀ ಕಲ್ಲಿನ ಮೂರ್ತಿಗಳಿಗೆ ನಿರ್ಮಿಸಿರುವ ಚಿಕ್ಕ ಚಿಕ್ಕ ಗುಡಿಗಳಿವೆ.
ಮಲ್ಲಯ್ಯ ಸ್ವಾಮಿ ದೇವಸ್ಥಾನದೊಳಗೆ ಪ್ರವೇಶಿಸದರೆ ಶಿಲ್ಪಕಲಾ ವೈಭವ ನೋಡಿಗರನ್ನು ಮಂತ್ರಮುಗ್ಧರನ್ನಾಗಿ ಮಾಡಿಸುತ್ತದೆ. ದೇವಸ್ಥಾನದ ಹೊರಾಂಗಣ ಮೇಲ್ಛಾವಣಿಯ ಕಲ್ಲಿನ ಚಾವಣಿ ಹಾಗೂ ಬಾಗಿಲು ಮೇಲ್ಭಾಗದಲ್ಲಿ ಸುಂದರವಾದ ಶ್ರೀಮಲ್ಲಯ್ಯ ಸ್ವಾಮಿಯ ಸುಂದರವಾದ ಕಲಾಕೃತಿಯನ್ನು ಕೆತ್ತಲಾಗಿದೆ. ಇಲ್ಲಿ ಶಿಲ್ಪಿಯ ಕೈಚಳಕ ಗಮನಿಸಿದರೆ ದೇವಾಲಯ ಶಿಲ್ಪಿ ಜಕಣಾಚಾರಿ ಕಾಲದಲ್ಲಿ ನಿರ್ಮಿಸಿದ್ದು ಎಂದು ಥಟ್ಟನೆ ಹೇಳಬಹುದು. ಕಬ್ಬಿಣದ ಸರಳಿನಿಂದಲೇ ಚಾವಣಿ ನಿರ್ಮಿಸಲಾಗಿದೆಯೇ ಎಂದು ಭಾಸವಾಗಿ ಐತಿಹಾಸಿಕ ಹಂಪೆ, ಬದಾಮಿ ಪಟ್ಟದಕಲ್ಲಿನ ಸೊಬಗನ್ನು ನೆನಪಿಸುತ್ತದೆ.
ದೇವಸ್ಥಾನದ ಎಡ, ಬಲ ಬದಿಗಳಲ್ಲಿ ಧ್ವಾರಪಾಲಕ ವಿಗ್ರಹಗಳನ್ನು ಕೆತ್ತನೆ ನಿಲ್ಲಿಸಲಾಗಿದೆ ಹಾಗೂ ಉತ್ತರ ದಿಕ್ಕಿನಲ್ಲಿ ಒಂದೇ ಕಲ್ಲಿನಲ್ಲಿ ಸಾಲು ವಿಗ್ರಹಗಳನ್ನು ಕೆತ್ತನೆ ಮಾಡಲಾಗಿದೆ. ದೇವಸ್ಥಾನ ಸಂಪೂರ್ಣ ಇತಿಹಾಸ ಸಾರುವ ಶಿಲಾಶಾಸನವೊಂದು ಇದೆ. ಆದರೆ ಅದಕ್ಕೆ ಅಂಧಶ್ರದ್ಧೆ ತಿ ಭಕ್ತರು ಕುಂಕುವ ಎಣ್ಣೆ ಸವರಿ ಪೂಜಿಸಿದ್ದರಿಂದ ಅಕ್ಷರಗಳು ಮಾಸಿ ಕಾಣದಂತಾಗಿವೆ.
ಬೆಟ್ಟದ ತುದಿಯ ಬೃಹತ್ ಬಂಡೆಯಲ್ಲಿ ಶ್ರೀಮಲ್ಲಯ್ಯ ಸ್ವಾಮಿಯ ತಂಗೆವ್ವ ದೇವಿ ಎಂದು ಕರೆಯಲ್ಪಡುವ ಶ್ರೀದೇವಿಯ ಶಿಲ್ಪಕಲಾಕೃತಿಯನ್ನು ಸುಂದರವಾಗಿ ಕೆತ್ತಲ್ಪಡಲಾಗಿದೆ. ಆದರೆ, ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ್ದರ ಪರಿಣಾಮ ಸದ್ಯ ಬೆಟ್ಟ ಏರಿ ಸರಳವಾಗಿ ದೇವಿಯ ದರ್ಶನವನ್ನು ಪಡೆಯಲು ಕಷ್ಟಸಾಧ್ಯ. ಶ್ರೀದೇವಿ ಹಾಗೂ ಲಿಂಗುಸ್ವರೂಪಿ ಮಲ್ಲಯ್ಯಸ್ವಾಮಿ ಇವರಿಬ್ಬರೂ ಅಣ್ಣ-ತಂಗಿಯರು ಎಂದು ಪೂರ್ವಿಜರು ಕರೆಯುತ್ತಾರೆ. ಬೆಟ್ಟದ ಮೇಲೆ ನೆಲೆಸಿರುವ ದೇವಿ ದರ್ಶನ ಪಡೆಯಲು ಮೆಟ್ಟಿಲು ನಿರ್ಮಾಣ ತುಂಬಾ ಅವಶ್ಯಕತೆ ಇದೆ ಎನ್ನುತ್ತಾರೆ ಭಕ್ತರು.
ಪ್ರತಿವರ್ಷ ಮಹಾಶಿವರಾತ್ರಿ ಅಮವಾಸ್ಯೆ ಬಳಿಕದ 9 ದಿನದಿಂದ ವಾರ ಕಾಲ ಮಲ್ಲಯ್ಯನ ಜಾತ್ರಾ ಮಹೋತ್ಸವ ಜರುಗುತ್ತದೆ. ಮಹಾರಥೋತ್ಸವ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸಂಭ್ರಮದಿಂದ ಆಗಮಿಸುತ್ತಾರೆ. ಯಾದಗಿರಿ ಮಲ್ಲಯ್ಯ, ಶ್ರೀಶೈಲ ಮಲ್ಲಯ್ಯ ದೇವರಿಗೆ ನಡೆದುಕೊಳ್ಳುವ ಈ ಭಾಗದ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಭಕ್ತರು, ಈ ಮೇಲಿನ ಕ್ಷೇತ್ರಗಳಷ್ಟೇ ಪ್ರಭಾವಿಯ ಶ್ರೀಮಲ್ಲಯ್ಯ ಸ್ವಾಮಿ ಅಚನೂರಿನಲ್ಲಿಯೂ ಲಿಂಗ ಸ್ವರೂಪದಲ್ಲಿ ನೆಲೆಸಿದ್ದಾನೆ ಎಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ದರ್ಶನಕ್ಕೆ ಬರುತ್ತಾರೆ. ಅದೇರೀತಿ ಮದುವೆ ಸೇರಿದಂತೆ ಇತರೆ ಕಲ್ಯಾಣ ಪೂಜಾಕಾರ್ಯಗಳ ಅನುಕೂಲಕ್ಕಾಗಿ ಸರ್ಕಾರದಿಂದ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತಿರುವ ಭಕ್ತರ ಸಂಖ್ಯೆಗೆ ಈಗಿನ ಕಲ್ಯಾಣ ಮಂಟಪ ಸಾಲುತ್ತಿಲ್ಲ.
ಕುಷ್ಟಗಿ ತಾಲೂಕಿನ ಸುಂದರ ಪರಿಸರ ತಾಣವಾದ ಅಚನೂರು ಮಲ್ಲಯ್ಯ ದೇವಸ್ಥಾನಕ್ಕೆ ನಿತ್ಯ ಭೇಟಿ ನೀಡುವ ಅಸಂಖ್ಯಾತ ಪ್ರವಾಸಿ ಭಕ್ತರು, ಯಾತ್ರಾರ್ಥಿಗಳಿಗೆ ವಿಶ್ರಾಂತಿ ಪಡೆಯಲು ಯಾತ್ರಿ ನಿವಾಸ ನಿರ್ಮಾಣ ತುಂಬಾ ಅತ್ಯಗತ್ಯವಿದೆ. ಅದೇರೀತಿ ಶುದ್ಧ ಕುಡಿಯುವ ನೀರು ಸೌಲಭ್ಯ ಒದಗಿಸಲು ಘಟಕ, ಶೌಚಾಲಯ ಗೃಹ ನಿರ್ಮಿಸಬೇಕು. ರಾತ್ರಿ ವೇಳೆ ಅಚನೂರಿನ ಪರಿಸರ ಸೌಂದರ್ಯ ಸೊಬಗನ್ನು ಸವಿಯಲು ರಸ್ತೆ ಮಾರ್ಗ ಹಾಗೂ ಇಡೀ ಬೆಟ್ಟಕ್ಕೆ ವಿದ್ಯುತ್ ದೀಪಗಳ ಸೌಲಭ್ಯ ಕಲ್ಪಿಸಬೇಕಿದೆ.
ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಈ ಪ್ರದೇಶವನ್ನು ಯಾತ್ರಾ ಸ್ಥಳವನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಭಕ್ತರಲ್ಲಿ ನಿರೀಕ್ಷೆ ನಿರಾಸೆ ತಂದಿದೆ.
ದೇವಸ್ಥಾನಕ್ಕೆ ಹೊಂದಿಕೊಂಡಿರುವ ಬೃಹದಾಕಾರದ ಬೆಟ್ಟವೀಗ ಅಕ್ರಮ ಗಣಿಗಾರಿಕೆಯಿದ ಕರಗುತ್ತಿದೆ. ಇದರಿಂದ ಐತಿಹಾಸಿಕ ದೇವಸ್ಥಾನಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಇದನ್ನು ತಡೆಯದಿದ್ದರೆ, ಐತಿಹಾಸಿಕ ದೇವಸ್ಥಾನ ಹಾಗೂ ಪರಿಸರ ನಶಿಸಿ ಹೋಗುವ ಕಾಲ ದೂರಿಲ್ಲ. ತಾವರೆ ಹೂಗಳು ಅರಳುವ ಬೃಹದಾಕಾರದ ಕೆರೆಯನ್ನು ಪುನಶ್ಚೇತನಗೊಳಿಸಿ ಭಕ್ತರು ಸುರಕ್ಷಿತವಾಗಿ ಇಳಿದೇರಲು ಮೆಟ್ಟಿಲು ವ್ಯವಸ್ಥೆಯನ್ನು ಮಾಡಬೇಕು. ಒಟ್ಟಾರೆ, ಈ ಭಾಗದಲ್ಲೇ ಬರುವ ಐತಿಹಾಸಿಕ ತಾಣಗಳಾದ ಬದಾಮಿ, ಪಟ್ಟದಕಲ್ಲು ಐಹೊಳೆಯಂತೆ ಪುರಾತತ್ವ ಇಲಾಖೆ ಇತಿಹಾಸ, ಧಾರ್ಮಿಕ ಪ್ರಸಿದ್ಧ ಕೇಂದ್ರ ಅಚನೂರು ಶ್ರೀಮಲ್ಲಯ್ಯ ದೇವಸ್ಥಾನವನ್ನು ಪುರಾತತ್ವ ಹಾಗೂ ದತ್ತಿ ಇಲಾಖೆ ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕು ಎನ್ನುತ್ತಾರೆ ಭಕ್ತಾದಿಗಳು.







