ತಾಯಿಯ ಸಂಕಲ್ಪ ಈಡೇರಿಸಲು ತೀರ್ಥಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಂಡ ವೃದ್ಧ ದಂಪತಿ!

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ: ತಾಯಿಯ ಸಂಕಲ್ಪ ಈಡೇರಿಸಲು ತೀರ್ಥಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಂಡಿರುವ ಗುಜರಾತ್ ರಾಜ್ಯ ಮೂಲದ ವೃದ್ಧ ದಂಪತಿ, ಜಿಲ್ಲೆಯ ಕುಷ್ಟಗಿ ತಾಲೂಕಿನ ಕುರುಬನಾಳ ಗ್ರಾಮದ ಹತ್ತಿರದ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಬಳಿಯ ಶ್ರೀತಾಯಮ್ಮದೇವಿ ದೇವಸ್ಥಾನದಲ್ಲಿ ಕಳೆದೊಂದು ದಿನದಿಂದ ವಾಸ್ತವ್ಯ ಹೂಡಿದ್ದಾರೆ !

ದಿನಬಳಕೆಗೆ ಅಗತ್ಯ ಬಟ್ಟೆಬರೆ ಹಾಗೂ ಆಹಾರ ಪದಾರ್ಥಗಳು ಹೊತ್ತ ಮೂರು ಚಕ್ರ ತಳ್ಳುವ ಬಂಡಿಯೊಂದಿಗಿದ್ದ ವೃದ್ಧ ದಂಪತಿ ಸ್ಥಿತಿಯನ್ನು ಗಮನಿಸಿದ ಕುಷ್ಟಗಿ ಪಟ್ಟಣದ ಮಾಜಿ ಸೈನಿಕ ಶಿವಾಜಿ ಹಡಪದ ಅವರು ಪತ್ನಿ ಬಸಮ್ಮರೊಂದಿಗೆ ಅವರನ್ನು ಭೇಟಿಯಾಗಿ ಸಹಾಯಕ್ಕೆ ಮುಂದಾದಾಗ ಗುಜರಾತಿನ ವೃದ್ಧ ದಂಪತಿ ನಯವಾಗಿ ತಿರಸ್ಕರಿಸಿ, ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುಜರಾತ್ ರಾಜ್ಯದ ದ್ವಾರಕಾ ಜಿಲ್ಲೆಯ ವೃದ್ಧ ದಂಪತಿಯನ್ನು ಸಂದರ್ಶಿಸಿದ ಶಿವಾಜಿ ಹಡಪದ ಅವರಿಗೆ ಕೆಲ ಕುತೂಹಲ ಸಂಗತಿಗಳು ತಿಳಿದುಬಂದಿವೆ. ರಸಾಯನಶಾಸ್ತ್ರದಲ್ಲಿ ಪಿ.ಎಚ್.ಡಿ ಮಾಡಿ ಚಿನ್ನದ ಪದಕ ಸಂಪಾದಿಸಿ ಸರ್ಕಾರಿ ಮೆಡಿಕಲ್ ಕಾಲೇಜ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ 74 ವಯಸ್ಸಿನ ಡಾ.ದೇವ ಉಪಾಧ್ಯಾಯ ಅವರು ಹಾಗೂ ಮನೋವಿಜ್ಞಾನ ವಿಷಯದಲ್ಲಿ ಪಿ.ಎಚ್.ಡಿ. ಮಾಡಿ ಚಿನ್ನದ ಪದಕ ಪಡೆದು ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ 72 ವಯಸ್ಸಿನ ಪತ್ನಿ ಡಾ. ಸರೋಜ್ ಉಪಾಧ್ಯಾಯ ಅವರು ಜತೆಗೂಡಿ ಪಾದಯಾತ್ರೆ ಮೂಲಕ ತೀರ್ಥಯಾತ್ರೆ ಕೈಗೊಂಡಿದ್ದಾರೆ.

ತನ್ನ ಕುಟುಂಬ ಸದಾ ಸುಖಿ ಇರುವಗೊಸ್ಕರ ಪಾದಯಾತ್ರೆ ಮೂಲಕ ತೀರ್ಥಕ್ಷೇತ್ರಗಳಿಗೆ ತೆರಳುವ ಸಂಕಲ್ಪ ತೊಟ್ಟಿದ್ದ ತಮ್ಮ ತಾಯಿ ಅನಾರೋಗ್ಯಕ್ಕೆ ಒಳಗಾದರು. ಆಗ ತನ್ನ ತೀರ್ಥಯಾತ್ರೆ ಹರಕೆಯ ಸಂಕಲ್ಪವನ್ನು ಈಡೇರಿಸುವಂತೆ ಮಗ ಹಾಗೂ ಸೊಸೆಯಲ್ಲಿ ಮಾತು ತೆಗೆದುಕೊಂಡು ಸಾವಿಗೀಡಾದರು. ಹಾಗಾಗಿ ತಾಯಿಯ ಸಂಕಲ್ಪ ಈಡೇರಿಸಲು ಪತ್ನಿಯೊಂದಿಗೆ ಕಳೆದ ಮೂರು ವರ್ಷಗಳಿಂದ ತೀರ್ಥಕ್ಷೇತ್ರಗಳತ್ತ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ತಿಳಿಸುತ್ತಾರೆ ಡಾ.ದೇವ್ ಉಪಾಧ್ಯಾಯ.

ಈ ಮಧ್ಯೆ ಮಹಾಮಾರಿ ಕೊರೋನಾ ಸಾಂಕ್ರಾಮಿಕ ಕಾರಣದಿಂದ ಒಂದು ವರ್ಷ ಕಾಲ ಪಾದಯಾತ್ರೆ ಸ್ಥಗಿತಗೊಳಿಸಲಾಗಿತ್ತು. ಸದ್ಯ ಪಾದಯಾತ್ರೆ ಮುಂದುವರಿಸಿದ್ದೇವೆ. ತಿರುಪತಿ, ಹರಿದ್ವಾರ, ರಾಮೇಶ್ವರ, ದ್ವಾರಕಾಗೆ ತೆರಳಿ ಬಳಿಕ ಜ್ಯೋತಿರ್ಲಿಂಗ ದರ್ಶನ ಪಡೆದುಕೊಂಡು ಮರಳಿ ತಿರುಪತಿಗೆ ಪ್ರಯಾಣ ಬೆಳೆಸಿದ್ದೇವೆ. ಈಗಾಗಲೇ ಸುಮಾರು 2500 ಕಿ.ಮೀ. ಕ್ರಮಿಸಿದ್ದೇವೆ. ತಮಗೆ ಬರುವ ಮಾಸಿಕ ಪಿಂಚಣಿ ಹಣದಿಂದ ತೀರ್ಥಯಾತ್ರೆಗೆ ಖರ್ಚು  ಮಾಡುತಿದ್ದೇವೆ. ಶುದ್ಧ ಸಸ್ಯಹಾರ ಸೇವಿಸುತ್ತಿರುವ ನಾವು ವಿಶ್ರಾಂತಿಗಾಗಿ ದೇವಸ್ಥಾನಗಳನ್ನೆ ಆಯ್ಕೆಮಾಡಿ ವಾಸ್ತವ್ಯ ಹೂಡುತ್ತಿದ್ದೇವೆ. ಆದರೆ, ಯಾರಿಂದಲೂ ಒಂದು ರೂಪಾಯಿ ಸಹಾಯ ಪಡೆದಿಲ್ಲ. ಆದರೆ, ತಮಗೆ ಬಂದ ಪಿಂಚಣಿ ಹಣದ ಶೇ.90ರಷ್ಟನ್ನು ಅನಾಥ ಆಶ್ರಮಗಳಿಗೆ ನೀಡಿದ್ದೇವೆ ಎಂದು ತಮ್ಮ ಸೇವಾ ಮನೋಭಾವ ವ್ಯಕ್ತಪಡಿಸುವ ವೃದ್ಧ ದಂಪತಿ, ತಿರುಪತಿಯಲ್ಲಿ ಸರ್ಕಾರಿ ನೌಕರಿ ಸೇವೆಯಲ್ಲಿರುವ ತಮ್ಮ ಮಕ್ಕಳೊಂದಿಗೆ ಉಳಿದ ವೃದ್ಧಾಪ್ಯ ಜೀವನವನ್ನು ಕಳೆಯುವುದಾಗಿ ಹೇಳಿಕೊಂಡಿದ್ದಾರೆ.

ಓದುಗ ದೊರೆಗಳೆ, ಇಂದಿನ ತಾಂತ್ರಿಕ ಆಧುನಿಕ ಯುಗದಲ್ಲಿ ತೀರ್ಥ ಕ್ಷೇತ್ರಗಳತ್ತ ಯಾತ್ರಾರ್ಥಿಗಳು ಪ್ರಯಾಣ ಬೆಳೆಸಲು ಹೆಲಿಕಾಪ್ಟರ್, ವಿಮಾನ, ರೈಲ್ವೇ ಸೇರಿದಂತೆ ನಾನಾ ರೀತಿಯ ವಾಹನಗಳ ವ್ಯವಸ್ಥೆ ಇದೆ. ಆದರೆ, ಸಾಕಷ್ಟು ಓದಿಕೊಂಡು ಉನ್ನತ ಹುದ್ದೆ ನಿಭಾಯಿಸಿ ನಿವೃತ್ತರಾದ ಬಳಿಕವೂ ಮಕ್ಕಳ ಆಸರೆಯಲ್ಲಿ ವಿಶ್ರಾಂತ ಜೀವನ ನಡೆಸದೇ ತಾಯಿಯ ಸಂಕಲ್ಪ ಆಸೆಯನ್ನು ಈಡೇರಿಸಲು ಕೈಗೊಂಡಿರುವ ಪಾದಯಾತ್ರೆಗೊಂದು ಇರಲಿ ನಮ್ಮದೊಂದು ಸಲಾಂ.!