ಪೊಲೀಸರು ನಿಷ್ಠೆಯಿಂದ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು : ಸಚಿವ ತಂಗಡಗಿ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಪೊಲೀಸರು ನಿಷ್ಠೆಯಿಂದ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.

ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಕುಷ್ಟಗಿ ಪೊಲೀಸ್ ಠಾಣೆ ಮತ್ತು ಕುಷ್ಟಗಿ ವೃತ್ತ ಕಾರ್ಯಾಲಯದ ಕಟ್ಟಡವನ್ನು ದಿನಾಂಕ 12-09-2023ರಂದು ಉದ್ಧಾಟಿಸಿದ ಬಳಿಕ ಅವರು  ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದ ಐದು ಜಿಲ್ಲೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಐದು ಸಾವಿರ ಟೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು,  ಈಗಾಗಲೇ ಕನಿಷ್ಠ 3 ಸಾವಿರ ಕೋಟಿ ನೀಡಿದ್ದಾರೆ. ಈ ಅನುದಾನಕ್ಕೆ ಕ್ರಿಯಾಯೋಜನೆ ನೀಡಿದರೆ ಇನ್ನೂ 2 ಸಾವಿರ ಕೋಟಿ  ಬಿಡುಗಡೆ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ. ಸೆ.17 ರಂದು ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಸಭೆ ನಡೆಸಿ ಕ್ರಿಯಾಯೋಜನೆ ಸಲ್ಲಿಸಲಿದ್ದೇವೆ. 3 ಸಾವಿರ ಕೋಟಿ ಖರ್ಚು ಮಾಡಿದರೆ, 2 ಸಾವಿರ ಕೋಟಿ ಸೇರಿ ಒಟ್ಟು ಕೆಕೆಆರ್’ಡಿಬಿಯಿಂದ ಇದೇ ವರ್ಷ 5 ಸಾವಿರ ಕೋಟಿ ರೂಪಾಯಿ ಈ ಭಾಗದ ಅಭಿವೃದ್ಧಿಗೆ ಖರ್ಚಾಗಲಿದೆ. ಕೊಪ್ಪಳ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಲಾಗಿದೆ. ಅದರಲ್ಲೂ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷವಾಗಿ ಕುಷ್ಟಗಿ ತಾಲೂಕಿಗೆ ಹೆಚ್ಚು ಅನುದಾನ ನೀಡಲಾಗಿದೆ. ಕೆಕೆಆರ್’ಡಿಬಿಯಿಂದ ಪ್ರತಿ ವರ್ಷ 500 ಕೋಟಿ ರೂಪಾಯಿ ಅನುದಾನ ಕುಷ್ಟಗಿ ಕ್ಷೇತ್ರಕ್ಕೆ ಸಿಗಲಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಪಕ್ಷ ರಾಜಕೀಯ ವಿಷಯದಲ್ಲಿ ಜಿಲ್ಲೆಯ ಸಂಸದರು, ಶಾಸಕರ ವೇದಿಕೆ ಬೇರೆಯಾಗಿದ್ದರೂ ಈ ಭಾಗದ ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದರು.

ಕೊಪ್ಪಳ ಜಿಲ್ಲೆಯ ಪೊಲೀಸ್ ಇಲಾಖೆಗೆ ಮೂಲಭೂತ ಸೌಕರ್ಯ ಸೇರಿದಂತೆ ವಾಹನಗಳ ಖರೀದಿ ಹಾಗೂ ಇತರೆ ಸಲಕರಣೆಗಳ ಖರಿದಿಗೆ ಜಿಲ್ಲಾ ವರಿಷ್ಠಾಧಿಕಾರಿ ಯಶೋಧಾ ವಂಟಿಗೋಡಿ ಅವರು ಬೇಡಿಕೆ ಸಲ್ಲಿಸಿದ್ದು, ಸೆ. 17 ರಂದು ಕ್ರಿಯಾಯೋಜನೆ ಕುರಿತು ಸಭೆ ನಡೆಸಲಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕ್ರಿಯಾ ಯೋಜನೆ ಸಿದ್ದಪಡಿಸಿಕೊಡಿ ಕೆಕೆಆರ್’ಡಿಬಿಯಿಂದ ಅನುದಾನ ಮಂಜೂರು ಮಾಡಿಸುವುದಾಗಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಈ ವೇಳೆ ಶಾಸಕ ದೊಡ್ಡನಗೌಡ ಎಚ್.ಪಾಟೀಲ್, ಸಂಸದ ಸಂಗಣ್ಣ ಕರಡಿ, ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪೂರು, ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಲೋಕೇಶ ಕುಮಾರ, ಎಸ್’ಪಿ ಯಶೋಧಾ ವಂಟಿಗೋಡಿ, ಕುಷ್ಟಗಿ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಕೊಪ್ಪಳ ಸಿಪಿಐ ಅಮರೇಶ ಹುಬ್ಬಳ್ಳಿ, ಮಹಾಂತೇಶ ಸಜ್ಜನ, ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ, ತಾ.ಪಂ.ಇಒ ಶಿವಪ್ಪ ಸುಬೇದಾರ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಪಿಎಸ್’ಐ ಮುದ್ದುರಂಗಸ್ವಾಮಿ, ಕ್ರೈಂ ಪಿಎಸ್’ಐ ಮಾನಪ್ಪ, ತಾವರಗೇರಾ ಪಿಎಸ್’ಐ ನಾಗರಾಜ ಕೊಟಗಿ, ಹನುಮಸಾಗರ ಪಿಎಸ್’ಐ ಸೇರಿದಂತೆ ಇತರರು ಇದ್ದರು.