ಶರಣು ಚೆನ್ನದಾಸರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಸುಕ್ಷೇತ್ರ ಪುರದ ಐತಿಹಾಸಿಕ ಕೋಟಿಲಿಂಗು ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರಾವಣ ಮಾಸ ಕಡೇ ಸೋಮವಾರ ಸಂಜೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಮಧ್ಯೆ 14ನೇ ವರ್ಷದ ರಥೋತ್ಸವ ಅತಿ ವೈಭವದಿಂದ ಜರುಗಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ಸೋಮನಾಥೇಶ್ವರ ಲಿಂಗುವಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಸಂಜೆ 4-00 ಗಂಟೆಗೆ ಉಮಲೂಟಿ ಗ್ರಾಮದ ಅನ್ನದಾನರಾಜ ನಾಡಗೌಡರ ಮನೆಯಿಂದ ಸಕಲ ವಾದ್ಯ ಮೇಳದೊಂದಿಗೆ ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಕಳಸ ತರಲಾಯಿತು.
ಬಳಿಕ 5-00 ಗಂಟೆಗೆ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ಶ್ರೀ ಸೋಮೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಸ್ಥಳೀಯ ಶಾಸಕ ದೊಡ್ಡನಗೌಡ ಎಚ್.ಪಾಟೀಲ್, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ಹಾಗೂ ಪುರ ಗ್ರಾಮದ ಮುಖಂಡರು ಹಾಗೂ ಸಿಪಿಐ ಯಶವಂತ ಬಿಸನಹಳ್ಳಿ, ತಾವರಗೇರಾ ಪಿಎಸ್’ಐ ನಾಗರಾಜ ಕೊಟಗಿ, ಹನುಮಸಾಗರ ಕ್ರೈಂ ಪಿಎಸ್’ಐ ಬಸವರಾಜ ಟಿಎಲ್ ಹಾಗೂ ಕುಷ್ಟಗಿ, ಹನುಮಸಾಗರ, ತಾವರಗೇರಾ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಬೆಳಿಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು ಅವರು ಕೋಟಿ ಲಿಂಗು ಸೋಮೇಶ್ವರ ದರ್ಶನ ಪಡೆದು ಹೋಗಿದ್ದರು.
ಶ್ರೀ ಸೋಮೇಶ್ವರ ಉತ್ಸವ ಮೂರ್ತಿ ಇರಿಸಿದ ತೇರು
ಸಕಲ ವಾದ್ಯ ಮೇಳಗಳೊಂದಿಗೆ ರಥ ಬೀದಿಯಲ್ಲಿ ಸಾಗುವ ಸಂದರ್ಭದಲ್ಲಿ ಪುರ, ತಾವರಗೇರಾ, ಕುಷ್ಟಗಿ ತಾಲೂಕು ಸೇರಿದಂತೆ ಕೊಪ್ಪಳ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತಾದಿಗಳು ಮತ್ತು ನವದಂಪತಿಗಳು ತೇರಿಗೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ರಥೋತ್ಸವ ಕಣ್ತುಂಬಿಕೊಂಡರು.