ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಸುಕ್ಷೇತ್ರ ಪುರ ಗ್ರಾಮದ ಐತಿಹಾಸಿಕ ಕೋಟಿಲಿಂಗು ಸೋಮೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವರಿಗೆ ಕಾಣಿಕೆ ಸಲ್ಲಿಸಲು ದೇವಸ್ಥಾನ ಸೇವಾ ಸಮಿತಿ ‘ಇ-ಹುಂಡಿ’ ಸ್ಥಾಪಿಸಿ ಅನುಕೂಲ ಕಲ್ಪಿಸಲಾಗಿದೆ.
ಆಧುನಿಕ ಯುಗಕ್ಕೆ ತಕ್ಕಂತೆ ಭಕ್ತರೂ ಬದಲಾದಂತೆ ದೇವಸ್ಥಾನಗಳಲ್ಲಿ ಸೇವಾ ವ್ಯವಸ್ಥೆಯೂ ಬದಲಾಗುತ್ತಿದೆ. ಈ ಹಿಂದಿನ ಕಾಣಿಕೆ ಹುಂಡಿ ಜಮಾನ ಬದಲಾಗಿ ಇ-ಕ್ಯಾಸ್ ಸೇವೆಯಾಗಿ ಕಾಣಿಕೆ ಸಲ್ಲಿಸಲು ‘ಇ- ಹುಂಡಿ’ ವ್ಯವಸ್ಥೆ ಜಾರಿಗೆ ತಂದು ಅನುಕೂಲ ಕಲ್ಪಿಸಲಾಗುತ್ತಿದೆ. ಮೊಬೈಲ್ ಹೊಂದಿರುವ ಬಹುತೇಕರು, ಪೋನ್ ಪೇ, ಗೂಗಲ್ ಪೇ, ಪೇಟಿಯಂ ಮೂಲಕವೇ ಹಣದ ವ್ಯವಹಾರ ಮಾಡುವುದು ಹೆಚ್ಚು. ಹೀಗಾಗಿ ಬದಲಾದ ಜಮಾನದಂತೆ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿಗಳು ಸಹ ಆನ್ಲೈನ್ ಯುಗಕ್ಕೆ ಪರಿವರ್ತನೆಗೊಂಡು ಆನ್ಲೈನ್ ಪೇಮೆಂಟ್ ಸೌಲಭ್ಯ ಪಡೆಯಲು ಇ-ಹುಂಡಿ(ಕ್ಯೂಆರ್ ಕೋಡ್ ಸ್ಕ್ಯಾನ್)ಗಳಾಗಿ ಪರಿವರ್ತನೆಯಾಗಿವೆ.
ನಾಡಿನ ಬಹುತೇಕ ದೇವಸ್ಥಾನಗಳಲ್ಲಿ ಜಾರಿಗೆ ತಂದಿರುವಂತೆ ಇ-ಹುಂಡಿ ಪದ್ಧತಿಯನ್ನು ಕುಷ್ಟಗಿ ತಾಲೂಕಿನ ಸುಕ್ಷೇತ್ರ ಪುರ ಗ್ರಾಮದ ಐತಿಹಾಸಿಕ ಕೋಟಿಲಿಂಗು ಸೋಮೇಶ್ವರ ದೇವಸ್ಥಾನದಲ್ಲಿ ಜಾರಿಗೆ ತರಲು ದೇವಸ್ಥಾನದ ಸೇವಾ ಕಮೀಟಿಯ ಮುಖ್ಯಸ್ಥರಾದ ಕುಷ್ಟಗಿ ತಾಲೂಕು ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ಮುಂದಾಗಿದ್ದಾರೆ. ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ ಜರುಗಲಿರುವ ಕೋಟಿಲಿಂಗು ಪುರ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳಲ್ಲಿ ಕ್ಯಾಶ್ ಇಲ್ಲದಿದ್ದರೆ ದೇಣಿಗೆ ಪೆಟ್ಟಿಗೆ ಸೇರಿದಂತೆ ದೇವಸ್ಥಾನದ ಪ್ರಾಂಗಣದಲ್ಲಿ ಅಲ್ಲಲ್ಲಿ ಅಳವಡಿಸಿರುವ ‘ಕ್ಯೂಆರ್ ಕೋಡ್’ ಸ್ಟೀಕರ್ ಅಂಟಿಸಿದ್ದು, ಸ್ಕ್ಯಾನ್ ಮಾಡಿ ಕಾಣಿಕೆ ಸಲ್ಲಿಸಬಹುದು. ಅಲ್ಲದೆ ದೇವಸ್ಥಾನದ ಅಭಿವೃದ್ಧಿಗೆ ಹಣದ ರೂಪದಲ್ಲಿ ದೇಣಿಗೆ ಸಲ್ಲಿಸುವ ಭಕ್ತರು ಕ್ಯೂಆರ್ ಕೋಡ್ ಮೂಲಕ ಕಾಣಿಕೆ ಸೇವೆ ಸಲ್ಲಿಸಿ ರಶೀದಿ ಪಡೆದುಕೊಳ್ಳುವ ಸಹ ಪಾವತಿ ವ್ಯವಸ್ಥೆ ಮಾಡಲಾಗಿದೆ. ಎಂದಿನಂತೆ ದೇವಸ್ಥಾನದಲ್ಲಿ ಕಾಣಿಕೆ ಪೆಟ್ಟಿಗೆ ಇರಿಸಲಾಗಿದ್ದು, ಅದರಲ್ಲಿಯೂ ಸಹ ತಮ್ಮ ಹಣದ ಕಾಣಿಕೆ ಸಲ್ಲಿಸಬಹುದು ಎಂದು ತಹಸೀಲ್ದಾರ್ ಶೃತಿ ಅವರು ತಿಳಿಸಿದ್ದಾರೆ.
ಒಟ್ಟಾರೆ, ಈ ಆಧುನಿಕ ಆನ್ಲೈನ್ ಯುಗದಲ್ಲಿ ಭಕ್ತರೂ ಬದಲಾದಂತೆ ದೇವಸ್ಥಾನಗಳೂ ಸಹ ಬದಲಾಗುತ್ತಿರುವುದು ವಿಶೇಷ ಎನ್ನಬಹುದು.