ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಮಾರುತಿ ವೃತ್ತದಿಂದ ಕನಕದಾಸ ವೃತ್ತದ ವರೆಗಿನ ರಾಜ್ಯ ಹೆದ್ದಾರಿಯ ಬದಿ ಕೈಗೊಂಡಿರುವ ಕುಡಿಯುವ ನೀರು ಪೂರೈಸುವ ಮುಖ್ಯ ಪೈಪ್ಲೈನ್ ಕಾಮಗಾರಿ ತೀರಾ ಅವೈಜ್ಞಾನಿಕವಾಗಿದೆ ಎಂದು ಪುರಸಭೆ ಸದಸ್ಯ ಸೇರಿದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದ್ರಾಬಾದ್ ವ ಹುಬ್ಬಳ್ಳಿ ಸಂಪರ್ಕ ಸಾಧಿಸುವ ರಾಜ್ಯ ಹೆದ್ದಾರಿ ಇದಾಗಿದ್ದು, ಪುರಸಭೆಯಿಂದ ವಿಶೇಷ ಎಸ್’ಎಫ್’ಸಿ ಅನುದಾನದಡಿ ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತ,. ಮೋರುತಿ ವೃತ್ತ ಮಾರ್ಗವಾಗಿಸಂದೀಪ ನಗರ ರಸ್ತೆ ವರೆಗೆ ಹಾಗೂ ಬಸವೇಶ್ವರ ವೃತ್ತದಿಂದ ಪುರಸಭೆ ಟಿಪ್ಪುಸುಲ್ತಾನ್ ವೃತ್ತದ ವರೆಗೆ ಡಿವೈಡರ್ ರಸ್ತೆ, ಡಾಂಬರೀಕರಣ, ಎರಡೂಬದಿಯಲ್ಲಿ ಚರಂಡಿ, ಫೇವರ್ಸ ಅಳವಡಿಕೆ ಕಾಮಗಾರಿ ಕಳೆದೊಂದು ವರ್ಷದಿಂದ ಆರಂಭಗೊಂಡಿದ್ದು ಆಮೆ ಗತಿಯಲ್ಲಿ ಸಾಗುಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಕೈಗೊಂಡಿರುವ ಕುಡಿಯುವ ನೀರಿನ ಪ್ಲಾಸ್ಟಿಕ್ ಪೈಪ್ಲೈನ ಸಹ ವೈಜ್ಞಾನಿಕವಾಗಿ ಅಳವಡಿಸದೇ ಫೇವರ್ಸ ಅಳವಡಿಸುವ ಫುಟ್ಪಾತ್ ಜಾಗೆಯಲ್ಲಿ ಒಂದುವರೆ ಗೇಣಿನಷ್ಟು ತೆಗ್ಗು ಅಗೆದು ಪೈಪ್ ಅಳವಡಿಸಲಾಗುತ್ತಿದೆ. ಇಲ್ಲಿ ಭಾರಿ ವಾಹನಗಳು ಸಂಚರಿಸುವ ಮಾರ್ಗಯಿದಾಗಿದ್ದು, ಪೈಪು ಒಡೆಯುವುದು ಮಾತ್ರ ಖಚಿತ. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರ ಗಮನಕ್ಕೆ ತಂದಾಗ ಕಾಮಗಾರಿ ನಡೆಸದಂತೆ ಸೂಚಿಸಿದ್ದಾರೆ. ಆದರೆ, ರಾತ್ರೋರಾತ್ರಿ ಗುತ್ತಿಗೆದಾರರು ಪೈಪು ಅಳವಡಿಕೆಗೆ ಮುಂದಾಗಿದ್ದಾರೆ ಎಂದು ಪುರಸಭೆ ಸದಸ್ಯ ರಾಮಣ್ಣ ಬಿನ್ನಾಳ ಸೇರಿದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರನ್ನು ಪೋನ್ ಕರೆ ಮೂಲಕ ವಿಚಾರಿಸಿದಾಗ ಪೈಪ್ಲೈನ ಅಳವಡಿಕೆ ಅವೈಜ್ಞಾನಿಕ ರೀತಿಯಲ್ಲಿದೆ. ಕಾಮಗಾರಿ ಸ್ಥಗಿತಗೊಳಿಸಲು ತಿಳಿಸಿದ್ದೇನೆ ಎಂದು ಪ್ರತಿಕ್ರಿಯೇ ನೀಡಿದ್ದಾರೆ. ಪೈಪ್ಲೈನ್ ಅಳವಡಿಕೆ ಮಾತ್ರ ಮುಂದುವರೆದಿದೆ.