ಕೃಷಿ ಪ್ರಿಯ ನ್ಯೂಸ್
ಕೊಪ್ಪಳ : ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ನಾರಿ ಶಕ್ತಿ ವಂದನಾ ಅಧಿನಿಯಮ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ನಿರ್ಧರ ಮಾಡಿರುವುದನ್ನು ಸ್ವಾಗತಿಸಿ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾ ಕಾರ್ಯಕರ್ತರು ಬುಧವಾರ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮ ಆಚರಿಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆದ ಸಂಭ್ರಮಾಚರಣೆಯಲ್ಲಿ ಪಕ್ಷದ ಮಹಿಳಾ ಮೋರ್ಚಾ ಅಧ್ಯಕ್ಷೆ ಶೈಲಜಾ ಬಾಗಲಿ ಹಾಗೂ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರು ಅವರು ಮಾತನಾಡಿ, ಕಳೆದ 30 ವರ್ಷಗಳ ಹೋರಾಟದ ಫಲವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ನಾರಿ ಶಕ್ತಿ ವಂದನಾ ಅಧಿನಿಯಮ ಮಸೂದೆ ಮಂಡನೆಗೆ ನಿರ್ಧಾರ ಮಾಡಿದೆ. ಇನ್ನೆರಡು ದಿನಗಳಲ್ಲಿ ಮಸೂದೆ ಕಾನೂನಾಗಿ ಜಾರಿಯಾಗಲಿದ್ದು, ಇದರಿಂದ ಸ್ಥಳೀಯ ಸಂಸ್ಥೆಯಿಂದ ವಿಧಾನಸಭಾ, ಲೋಕಸಭಾದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ಪರ್ಧಿಸಲು ಅವಕಾಶ ಒದಗಿಬರಲಿದೆ. ಮಹಿಳೆಯರಿಗೆ ಆತ್ಮಶಕ್ತಿ ತುಂಬುವ ಕಾರ್ಯವನ್ನು ನರೇಂದ್ರ ಮೋದಿ ಅವರು ಕೈಗೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ, ಮಂಡಲ ಕಾರ್ಯದರ್ಶಿ ಚಂದ್ರಕಾಂತ ವಡಿಗೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.