ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಈ ವರೆಗೂ ಯಾರೂ ಮಾಡದ ಸಾಧನೆಯನ್ನು ನಮ್ಮ ಭಾರತದ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಉಪಗ್ರಹ ಉಡಾವಣೆ ಮಾಡಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಸಿ ಜಗತ್ತನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿರುವುದು ಈಗ ಇತಿಹಾಸ.
ಅದೇ ಮಾದರಿಯಲ್ಲಿ ಜಿಲ್ಲೆಯ ಕುಷ್ಟಗಿ ಪಟ್ಟಣದ ಯುವಕರ ಬಳಗ, ಗೌರಿ ಗಣೇಶ ಚತುರ್ಥಿ ಪ್ರಯುಕ್ತ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಉಪಗ್ರಹ ಉಡಾವಣೆ ಹಾಗೂ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸಿ ರೋವರ್ ಬಿಡುವ ಪ್ರಾತ್ಯಕ್ಷಿಕೆಯನ್ನು ತೋರಿಸುವ ಮೂಲಕ ಸಾರ್ವಜನಿಕರ ಗಮನಸೆಳೆದಿದ್ದಾರೆ.
ಹೌದು.., ಪಟ್ಟಣದ ತೆಗ್ಗಿನ ಓಣಿಯ ಬಸವರಾಜ ಚಿತ್ರ ಮಂದಿರ ಬಳಿ ಪ್ರತಿಷ್ಠಾಪಿಸಿರುವ ಗಣೇಶನ ಸನ್ನಿಧಾನದಲ್ಲಿ ಚಂದ್ರಯಾನ-3 ಯಶಸ್ವಿ ಕಥನವನ್ನು ಪ್ರಾತ್ಯಕ್ಷಿಕೆ ಮೂಲಕ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಈ ದೃಶ್ಯವನ್ನು ನೇರವಾಗಿ ಕಣ್ತುಂಬಿಕೊಳ್ಳಬಹುದು. ತೆಗ್ಗಿನ ಓಣಿಯ ನಿವಾಸಿ ಹನುಮೇಶ ಕಲ್ಲುಬಾವಿ ಎಂಬುವರು ಉಪಗ್ರಹ ಮತ್ತು ವಿಕ್ರಮ್ ಲ್ಯಾಂಡರ್ ಹಾಗೂ ರೋವರ್ ತಯಾರಿಸಿ ಚಂದ್ರನ ಅಂಗಳ ಸಿದ್ಧಪಡಿಸಿ ಗಣೇಶನ ದರ್ಶನ ಪಡೆಯಲು ಬರುವವರಿಗೆ ಉಪಗ್ರಹ ಉಡಾವಣೆಯ ಜಲಕ್ ಪ್ರದರ್ಶನ ಮಾಡುತ್ತಿದ್ದಾರೆ.
ಶಾಲಾ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ಚಂದ್ರಯಾನ-3 ಉಡಾವಣೆ ಪ್ರಾತ್ಯಕ್ಷಿಕೆ ಖುಷಿ ಕೊಟ್ಟಿದ್ದು, ಹೊಸ ಲೋಕಕ್ಕೆ ಕರೆದೊಯ್ಯುತ್ತಿರುವುದು ಇಲ್ಲಿಯ ತೆಗ್ಗಿನ ಓಣಿ ಗಣೇಶ ಪ್ರತಿಷ್ಠಾಪನೆ ಸೇವಾ ಸಮಿತಿಯ ವಿಶೇಷ.!