ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಸೋಮವಾರ ಗೌರಿ ಗಣೇಶ ಚತುರ್ಥಿಯ ನಿಮಿತ್ತವಾಗಿ ಮುಸ್ಲಿಂ ಬಾಂಧವರು ಗಣೇಶ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಭಾವೈಕ್ಯತೆ ಮೆರೆದರು.
ಗ್ರಾಮದ ಭೋವಿ ಸಮುದಾಯದ ಯುವಕರ ಬಳಗ ಗ್ರಾಮದಲ್ಲಿಯೇ ತಯಾರಿಸಲಾದ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್ ಮೂಲಕ ಭವ್ಯವಾಗಿ ಮೆರವಣಿಗೆ ನಡೆಸಿದರು.
ಹಳೇ ಬಸ್ ನಿಲ್ದಾಣದಿಂದ ಗೂಳಿ ಬಸವೇಶ್ವರ ವೃತ್ತ, ಪೊಲೀಸ್ ಠಾಣೆ, ಗಾಂಧಿ ವೃತ್ತ ಮಾರ್ಗವಾಗಿ ಭೋವಿ ಸಮುದಾಯ ಭವನಕ್ಕೆ ಮೆರವಣಿಗೆ ಮುಖಾಂತರ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಗ್ರಾಮದ ಮುಸ್ಲಿಂ ಬಾಂಧವರು ಜೆಸಿಬಿ ಸಹಾಯ ಪಡೆದು ಗಣೇಶ ಮೂರ್ತಿಗೆ ಪುಷ್ಪ ಸಮರ್ಪಿಸಿ ಸ್ವಾಗತಿಸಿಕೊಂಡಿರುವುದು ವಿಶೇಷವಾಗಿ ಕಂಡುಬಂತು.
ಮೂರ್ತಿ ಪೂಜೆ ವಿಷಯದಲ್ಲಿ ಹಿಂದೂ ಮುಸ್ಲೀಮರ ಧರ್ಮದ ನಡುವೆ ಭಿನ್ನತೆ ಇದ್ದರೂ ಸಹ ಅದೆಲ್ಲವ ಮರೆತು ಮುಸ್ಲಿಮರು ಗಣೇಶ ಮೂರ್ತಿಗೆ ಪುಷ್ಪ ಅರ್ಪಿಸಿ ಭವ್ಯವಾಗಿ ಸ್ವಾಗತಿಸಿದ್ದು ಭಾವೈಕ್ಯತೆಗೆ ಸಾಕ್ಷಿಯಾಯಿತು.
ಇದೇ ವೇಳೆ ಮಹಮ್ಮದ್ ರಿಯಾಜ್ ಖಾಜಿ, ಮಹಾಂತೇಶ ಅಗಸಿಮುಂದಿನ, ಸೂಚಪ್ಪ ದೇವರಮನಿ, ಶ್ರೀಶೈಲ್‌ಮೋಟಗಿ, ವಿಶ್ವನಾಥ ಕನ್ನೂರ, ರಿಜವಾನ್ ಮೋಮಿನ್, ಹುಸೇನ್ ನವಲಿ, ಹುಸೆನ ಗೋಡಾ, ಮಹಮ್ಮದ ಮುಲ್ಲಾ , ಜಾವಿದ ಬನಹಟ್ಟಿ, ಮುರ್ತುಜಾ ಬದಾಮಿ, ಭರಮು ದೇವರ ಮನಿ ಇತರರು ಇದ್ದರು.