ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ತಯಾರಿಸಿದ ಗಣೇಶ್ ಮೂರ್ತಿಗಳನ್ನು ಮಾರಾಟ ಮಾಡಿದರೆ ಕಾನೂನುರೀತ್ಯ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ಮೂರ್ತಿ ಮಾರಾಟಗಾರರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದ ಪ್ರಸಂಗ ಭಾನುವಾರ ನಡೆಯಿತು.
ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಪಿಓಪಿಯಿಂದ ತಯಾರಿಸಿದ ಗಣಪನ ಮೂರ್ತಿಗಳ ಪತ್ತೆಗೆ ಭಾನುವಾರ ಮದ್ಯಾಹ್ನ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸಂತೆ ಬಯಲು, ಬಸವೇಶ್ವರ ವೃತ್ತ, ಮಾರುತಿ ವೃತ್ತ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿತು. ಆದರೆ, ಮಾರುತಿ ವೃತ್ತದ ಬಳಿ ರಸಾಯನಿಕಯುಕ್ತ ಪಿಓಪಿಯಿಂದ ತಯಾರಿಸಿದ ಮೂರ್ತಿಗಳನ್ನು ಪತ್ತೆ ಮಾಡಿ ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡರು.
ಪಿಓಪಿಯಿಂದ ತಯಾರಿಸಿದ ಮೂರ್ತಿಗಳನ್ನು ನಿಷೇಧಿಸಲಾಗಿದೆ ಎಂಬುದರ ಕುರಿತು ಸ್ಥಳೀಯ ಪುರಸಭೆ ನಮ್ಮ ಗಮನಕ್ಕೆ ತಂದಿಲ್ಲ. ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ಮಾಹಿತಿ ಇಲ್ಲದಿರುವುದರಿಂದ ಪಿಓಪಿ ಗಣೇಶ ಮೂರ್ತಿಗಳನ್ನು ವ್ಯಾಪಾರಕ್ಕೆ ತರಲಾಯಿತು. ಅಧಿಕಾರಿಗಳು ಏಕಾಏಕಿ ಮೂರ್ತಿಗಳನ್ನು ವಶಕ್ಕೆ ಪಡೆದು ಕ್ರಮ ಜರುಗಿಸುವುದು ಎಂದರೆ ಯಾವ ನ್ಯಾಯ ಎಂದು ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ವ್ಯಾಪಾರಿ ಹಾಗೂ ನಾಗರಿಕರು ತಹಸೀಲ್ದಾರ್ ಜೊತೆಗೆ ವಾಗ್ವಾದ ನಡೆಸಿದರು. ಬಳಿಕ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು, ಮಣ್ಣಿನಿಂದ ತಯಾರಿಸಿದ ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡಬೇಕು. ನಿಷೇಧಿತ ರಸಾಯನಿಕಯುಕ್ತ ಪಿಓಪಿ ಮೂರ್ತಿಗಳನ್ನು ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಪಿಎಸ್’ಐ ಮುದ್ದುರಂಗಸ್ವಾಮಿ ಸೇರಿದಂತೆ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ನಿಷೇಧಿತ ರಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿಯಲಿದೆ.
ರಾಜ್ಯ ಸರ್ಕಾರದ ಆದೇಶದನ್ವಯ ನಿಷೇಧಿತ ರಾಸಾಯನಿಕಯುಕ್ತ ಗಣೇಶ ಮೂರ್ತಿಗಳನ್ನು ಮಾರಾಟ ಹಾಗೂ ಖರೀದಿಸಿ ಪ್ರತಿಷ್ಠಾಪನೆ ಮಾಡುವುದು ಪರಿಸರ ಕಾಯ್ದೆಯಡಿ ಕಾನೂನು ಬಾಹೀರವಾಗಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿಷೇಧಿತ ರಸಾಯನಿಕಯುಕ್ತ ಮೂರ್ತಿ ಬದಲು ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಗೌರಿ ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು.
– ಶೃತಿ ಮಳ್ಳಪ್ಪಗೌಡರ್ ತಹಸೀಲ್ದಾರ್, ಕುಷ್ಟಗಿ.