ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಸೆ.17 ಹೈದರಾಬಾದ್ ಪ್ರಾಂತ್ಯ ವಿಮೋಚನೆಗಾಗಿ ಹೋರಾಡಿದ ಜಿಲ್ಲೆಯ ಕುಷ್ಟಗಿ ತಾಲೂಕಿನ ಇಬ್ಬರು ಸ್ವಾತಂತ್ರ್ಯ ಸೇನಾನಿಗಳನ್ನು ಶನಿವಾರ ಗೌರವಿಸಲಾಗಿದೆ.
ಕಲ್ಯಾಣ ಕರ್ನಾಟಕ ಉತ್ಸವ ಪ್ರಯುಕ್ತ ಇಂದು ತಾಲೂಕಾಡಳಿತ ಪರವಾಗಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸ್ವಾತಂತ್ರ್ಯ ಸೇನಾನಿಗಳ ನಿವಾಸಕ್ಕೆ ತೆರಳಿ ಗೌರವ ಸಲ್ಲಿಸಲಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ವಿಮೋಚನೆಗೆ ಹೋರಾಡಿದ ಅನೇಕ ಸ್ವಾತಂತ್ರ್ಯ ಸೇನಾನಿಗಳಲ್ಲಿ ಸದ್ಯ ಬದುಕುಳಿದಿರುವ ತಾಲೂಕಿನ ಇಬ್ಬರು ಮಹನಿಯರಾದ ಪಟ್ಟಣದ ನಿವಾಸಿ ಬಿ.ಕಿಷನರಾವ್ ವಕೀಲರು ಹಾಗೂ ಕುಕನೂರಿನಲ್ಲಿ ನೆಲೆಸಿರುವ ಪ್ರಹ್ಲಾದಾಚಾರ ಕಟ್ಟಿ ಅವರ ನಿವಾಸಕ್ಕೆ ಕಂದಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ವಾತಂತ್ರ್ಯ ಸೇನಾನಿಗಳಿಗೆ ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಗೌರವಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಲಬುರಗಿಯಲ್ಲಿ ನಡೆಯುವ ಕಲ್ಯಾಣ ಕರ್ನಾಟಕ ಉತ್ಸವದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಲು ಕುಷ್ಟಗಿ ತಾಲೂಕಿನ ಸ್ವಾತಂತ್ರ್ಯ ಯೋಧರಾದ ಪಟ್ಟಣದ ಬಿ.ಕಿಷನರಾವ್ ವಕೀಲರು ಹಾಗೂ ಕುಕನೂರಿನಲ್ಲಿ ನೆಲೆಸಿರುವ ಪ್ರಹ್ಲಾದಾಚಾರ ಕಟ್ಟಿ ಅವರನ್ನು ಕಳುಹಿಸಿಕೊಡುವ ವ್ಯವಸ್ಥೆಯನ್ನು ತಾಲೂಕು ಆಡಳಿತದಿಂದ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಭಾನುವಾರ ಪಟ್ಟಣದಲ್ಲಿ ಬೆಳಿಗ್ಗೆ ನಡೆಯುವ ಕಲ್ಯಾಣ ಕರ್ನಾಟಕ ಉತ್ಸವದ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಆಡಳಿತ ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ನಂತರ ಕಾರ್ಗಿಲ್ ಹುತಾತ್ಮ ವೀರಯೋಧ ಮಲ್ಲಯ್ಯ ವೃತ್ತದ ವರೆಗೆ ಕಲ್ಯಾಣ ಕರ್ನಾಟಕ ಉತ್ಸವ ಪ್ರಯುಕ್ತ ನೃತ್ಯಗಾರರಿಂದ ವಿಶೇಷ ಡೊಳ್ಳು ಕಲಾ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.