ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನಿಸಿದ ತಾಲೂಕಾಡಳಿತ !?

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಕುಷ್ಟಗಿ ತಾಲೂಕಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಕುರಿತು ತಾಲೂಕಾಡಳಿತ ಹೊರಡಿಸಿರುವ ಸಾರ್ವಜನಿಕ ಪ್ರಕಟಣೆ ಚರ್ಚೆಗೆ ಗ್ರಾಸವಾಗಿದೆ.!

ಹೈದ್ರಾಬಾದ್ ಪ್ರಾಂತ್ಯ ವಿಮೋಚನೆಗೆ ಹೋರಾಡಿದ ಸೇನಾನನಿಗಳ ಪೈಕಿ ಸದ್ಯ ತಾಲೂಕಿನಲ್ಲಿ ಸುಮಾರು 100ರ ಆಸುಪಾಸಿನ ವಯಸ್ಸು ಹೊಂದಿರುವ ಬಿ.ಕಿಶನರಾವ್ ಅವರು ಒಬ್ಬರೇ ಉಳಿದಿದ್ದಾರೆ. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಮತ್ತು ಹೈದರಾಬಾದ್ ಪ್ರಾಂತ್ಯ ವಿಮೋಚನಾ ದಿನಾಚರಣೆ ಸಂದರ್ಭದಲ್ಲಿ ತಾಲೂಕಾಡಳಿತವೇ ಆ ಮಹನಿಯರ ಮನೆಗೆ ತೆರಳಿ ಗೌರವಿಸುತ್ತಿತ್ತು. ಆದರೆ, ಸೆ.17 ಭಾನುವಾರ ಆಚರಿಸುತ್ತಿರುವ ಅಂದಿನ ಹೈದ್ರಾಬಾದ್ ಪ್ರಾಂತ್ಯ ವಿಮೋಚನೆ ದಿನಾಚರಣೆಯನ್ನು ಇಂದು ಕರೆಯಲ್ಪಡುವ ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಿಸುತ್ತಿರುವುದು ಸ್ವಾಗತಾರ್ಹ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಮಾಜದಲ್ಲಿ ತಮ್ಮದೇ ಆದ ಘನತೆ ಸ್ಥಾನಮಾನ ಹೊಂದಿರುತ್ತಾರೆ. ಆದರೆ, ಕಾರ್ಯಕ್ರಮಕ್ಕೆ ತಾಲೂಕಾಡಳಿತ ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯಲ್ಲಿ ಸಾಮಾನ್ಯರಂತೆ ಸ್ವಾತಂತ್ರ್ಯ ಹೋರಾಟಗಾರರು ಭಾಗವಹಿಸುವಂತೆ ಕೋರಿರುವುದು ಅಗೌರವ ತೋರಿದಂತಾಗುತ್ತದೆ ಎಂದು ಸ್ವಾತಂತ್ರ್ಯ ಸೇನಾನಿ, ತಪಸ್ವಿ ಮುರಡಿ ಭೀಮಜ್ಜ ಪ್ರತಿಷ್ಠಾನದ ಸಂಚಾಲಕ ಅಮೃತರಾಜ ಜ್ಞಾನಮೋಟೆ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್, ಹೈದರಾಬಾದ್ ಕರ್ನಾಟಕ ಪ್ರಾಂತ್ಯ ವಿಮೋಚನೆಗೆ ಹೋರಾಡಿದ ಸ್ವಾತಂತ್ರ್ಯ ಸೇನಾನಿ ಬಿ.ಕಿಶನರಾವ್ ಅವರ ಮನೆಗೆ ಇಂದು ತೆರಳಿ ಗೌರವಿಸಲಾಗಿದೆ. ಕಳೆದ ವರ್ಷ ಹೊರಡಿಸುತಿದ್ದ ಪ್ರಕಟಣೆ ಪ್ರತಿಯನ್ನೇ ಈ ಬಾರಿ ಹೊರಡಿಸಲಾಗಿದ್ದು, ಅದನ್ನು ಸರಿಪಡಿಸಿ ಹೊಸ ಪ್ರಕಟಣೆ ನೀಡಲು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.