ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಸಮಯಕ್ಕೆ ಸಾರಿಗೆ ಸಂಸ್ಥೆಯ ಬಸ್ ಬಾರದ ಹಿನ್ನಲೆಯಲ್ಲಿ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ ಪ್ರಸಂಗ ಗುರುವಾರ ನಡೆದಿದೆ.
ನಿಡಶೇಸಿ ಮಾರ್ಗವಾಗಿ ತಳುವಗೇರಾ, ಚಳಗೇರಾ, ಹನುಮಸಾಗರ ಕಡೆಗೆ ತೆರಳುವ ಬೆಳಗಿನ ಬಸ್ಸುಗಳು ನಿಡಶೇಸಿ ಗ್ರಾಮದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿಲ್ಲ. ಇದರಿಂದ ಶಾಲೆಗೆ ನಿಗದಿತ ಸಮಯಕ್ಕೆ ತೆರಳಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಕುಷ್ಟಗಿ – ಹನುಮಸಾಗರ ಮಾರ್ಗದ ಬಸ್ ತಡೆದು ರಸ್ತೆ ಬಂದ್’ಗೊಳಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಿಂದ ತಳುವಗೇರಾ ಗ್ರಾಮದ ಸರ್ಕಾರಿ ಆದರ್ಶ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಬೆಳಿಗ್ಗೆ ಹತ್ತು ಗಂಟೆ ವರೆಗೂ ಕಾದರೂ ಬಸ್ ಸಿಗುತ್ತಿಲ್ಲ. ಶಾಲೆಯ ತರಗತಿಗಳು 10 ಗಂಟೆಗೆ ಆರಂಭವಾಗುತ್ತವೆ. ಈ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ತುಂಬಿ ತುಳುಕುತಿದ್ದು, ಚಾಲಕ, ನಿರ್ವಾಹಕರು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೆ ಹಿಂದಿನ ಬಸ್ಸಿಗೆ ಬರುವಂತೆ ಹೇಳುತ್ತಾರೆ. ಇದರಿಂದಾಗಿ ಶಾಲೆಗೆ ನಿಗದಿತ ಸಮಯಕ್ಕೆ ಹೋಗಲು ಆಗದೇ ಬೆಳಗಿನ ತರಗತಿಗಳಿಂದ ವಂಚಿತರಾಗುತ್ತಿದ್ದೇವೆ. ಬೆಳಿಗ್ಗೆ 9.30ಕ್ಕೆ ಬಸ್ಸಿನ ಅನುಕೂಲ ಮಾಡಿಕೊಡಿ ಎಂದು ಸಾಕಷ್ಟು ಬಾರಿ ಸಾರಿಗೆ ಸಂಸ್ಥೆಯ ಕುಷ್ಟಗಿ ಘಟಕದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಏನು ಪ್ರಯೋಜನವಾಗುತ್ತಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ದೂರಿದರು.
ಬಳಿಕ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಸಾರಿಗೆ ಸಂಸ್ಥೆಯ ಅಧಿಕಾರಿ ಪ್ರಕಾಶ ಜಿಗಳೂರು ಅವರು ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ತೊಂದರೆಯಾಗದಂತೆ ಬಸ್ಸಿನಲ್ಲಿ ಅವಕಾಶ ಮಾಡಿಕೊಡಲು ಚಾಲಕ ಹಾಗೂನಿರ್ವಾಹಕರಿಗೆ ಸೂಚಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಕೈಬಿಡಲಾಯಿತು ಎಂದು ಗ್ರಾಮಸ್ಥರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.