ಕೊಪ್ಪಳ ಜಿಲ್ಲೆ ತೀವ್ರ ಬರಪೀಡಿತ ಪ್ರದೇಶ; ರಾಜ್ಯ ಸರಕಾರ ಘೋಷಣೆ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಸರಿಯಾದ ಸಮಯದಲ್ಲಿ ಅಗತ್ಯ ಮಳೆ ಸುರಿಯದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕಾರಟಗಿ, ಕುಕನೂರು, ಕುಷ್ಟಗಿ, ಯಲಬುರ್ಗಾ, ಕನಕಗಿರಿ ತಾಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶಗಳೆಂದು ಸರಕಾರ ಘೋಷಣೆ ಮಾಡಿದೆ.

2020ರ ಬರ ಘೋಷಣೆ ಮಾರ್ಗಸೂಚಿಯ ಮಾನದಂಡಗಳನ್ವಯ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಬೆಳೆಹಾನಿ, ಕುಡಿಯುವ ನೀರಿನ ಸ್ಥಿತಿಗತಿ ಕುರಿತು ವಾಸ್ತವ ಸಮೀಕ್ಷೆ(Ground Truthing) ನಡೆಸಿದರು. ಇವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯನುಸಾರ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ಪೈಕಿ 195 ತಾಲ್ಲೂಕುಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಇದರಲ್ಲಿ 161 ತೀವ್ರ ಬರಪೀಡಿತ ತಾಲ್ಲೂಕುಗಳು ಹಾಗೂ 34 ಸಾಧಾರಣ ಬರಪೀಡಿತ ತಾಲ್ಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಿಸಿಸಿದೆ‌.

ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಬರ ನಿರ್ವಹಣೆ ಕಾರ್ಯಕ್ರಮ ಕೈಗೊಳ್ಳಲು ಸರ್ಕಾರದಿಂದ SDRF/NDRF ನಿಯಮಗಳನ್ವಯ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ ದಿನಾಂಕ 13/09/2023 ರಂದು ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಟಿ.ಸಿ. ಕಾಂತರಾಜ್ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.