ಕರ್ನಾಟಕ ರಾಜ್ಯ ಗ್ರಂಥಾಲಯದ ಪುಸ್ತಕ ಆಯ್ಕೆ ಸಮಿತಿಗೆ ಕೊಪ್ಪಳ ಜಿಲ್ಲೆಯ ಇಬ್ಬರು ನೇಮಕ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಕರ್ನಾಟಕ ರಾಜ್ಯ ಗ್ರಂಥಾಲಯದ ಪುಸ್ತಕ ಆಯ್ಕೆ ಸಮಿತಿಗೆ ಕೊಪ್ಪಳ ಜಿಲ್ಲೆಯಿಂದ ಕುಷ್ಟಗಿ ತಾಲೂಕಿನ ಶಿಕ್ಷಕ ಹಾಗೂ ಲೇಖಕರಾದ ಕಿಶನರಾವ್ ಕುಲಕರ್ಣಿ ಹಾಗೂ ಗಂಗಾವತಿ ತಾಲೂಕಿನ ಅಧ್ಯಾಪಕಿ ಹಾಗೂ ಲೇಖಕಿಯಾದ ಡಾ.ಮಮ್ತಾಜ್ ಬೇಗಂ ಅವರನ್ನು ನೇಮಕ ಮಾಡಲಾಗಿದೆ.

ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆಯಲ್ಲಿರುವ ಲೇಖಕ ಕಿಶನರಾವ್ ಕುಲಕರ್ಣಿ ಅವರನ್ನು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ತಜ್ಞರ ವಿಭಾಗದಿಂದ ಹಾಗೂ ಗಂಗಾವತಿ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಅಧ್ಯಾಪಕರಾಗಿರುವ ಲೇಖಕಿ ಡಾ.ಮಮ್ತಾಜ್ ಬೇಗಂ ಅವರನ್ನು ಕಲಬುರಗಿ ಹಾಗೂ ಬೆಳಗಾವಿ ವಿಭಾಗದದಿಂದ ಮಹಿಳಾ ಸದಸ್ಯೆಯಾಗಿ ನೇಮಕ ಮಾಡಿ ರಾಜ್ಯಪಾಲರ ಆದೇಶಾನಯಸಾರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಆದೀನ ಕಾರ್ಯದರ್ಶಿಗಳು ದಿನಾಂಕ 20-09-2023 ರಂದು ಅದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು 2 ವರ್ಷಗಳ ಅವಧಿಗೆ ಅಥವಾ ಮುಂದಿನ ಸಮಿತಿ ಅಸ್ತಿತ್ವಕ್ಕೆ ಬರುವವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೂ ಬೆಂಗಳೂರಿನ ಮಲ್ಲತ್ತಹಳ್ಳಿಯ ಸಾಹಿತಿ ಮತ್ತು ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಕರೀಗೌಡ ಬೀಚನಹಳ್ಳಿ ಅವರ ಅಧ್ಯಕ್ಷತೆಯಲ್ಲಿ 16 ಮಂದಿ ಸದಸ್ಯರ ಸಮಿತಿಯನ್ನು ಪುನರ್ ರಚಿಸಿ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.