ಮೈಮೇಲೆ ಬಸ್ ಹರಿದು ಸ್ಥಳದಲ್ಲೇ ಮಹಿಳೆ ಸಾವು

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಮೈಮೇಲೆ ಬಸ್ ಹರಿದು ಮಹಿಳೆಯೋರ್ವಳು ಧಾರುಣವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ.

ಗ್ರಾಮದ ಸುಮಾರು 41 ವಯಸ್ಸಿನ ಶಾರವ್ವ ದುಗಲದ ಎಂದು ಗುರುತಿಸಲಾಗಿದೆ. ಕುಷ್ಟಗಿ ಪಟ್ಟಣದಿಂದ ಸ್ವಗ್ರಾಮ ಹಿರೇಬನ್ನಿಗೋಳಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಆಗಮಿಸಿದ್ದಾಳೆ. ಬಸ್ಸಿನಿಂದ ಇಳಿದು ಬಸ್ ಮುಂಭಾಗ ಹೊರಟ ಸಂದರ್ಭದಲ್ಲಿ ಚಾಲಕ ತತಕ್ಷಣ ಬಸ್ ಚಲಾಯಿಸಿದಾಗ ಮಹಿಳೆ ಮೇಲೆ ಬಸ್ ಹರಿದಿದೆ ಎನ್ನಲಾಗಿದೆ. ಮೃತಳು ಬೆನ್ನು ಬಾಗಿದ ಮಹಿಳೆಯಾಗಿದ್ದು, ಬಸ್ ಚಾಲಕನ ಕಣ್ಣಿಗೆ ಕಾಣದ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತ ದೇಹವನ್ನು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.