ಹನುಮಸಾಗರದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಹಿಂದೂ-ಮುಸ್ಲಿಂ ಸಾಥ್ !

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ ತಾಲೂಕಿನ ಹನಮಸಾಗರ ಗ್ರಾಮದಲ್ಲಿ ಗಣೇಶ ಚತುರ್ಥಿ ಹಬ್ಬ ಆಚರಣೆಯಲ್ಲಿ ಶುಕ್ರವಾರ ರಾತ್ರಿ ಹಿಂದೂ-ಮುಸ್ಲಿಂ ಬಾಂಧವರು ಸೇರಿಕೊಂಡು ಗಣೇಶ ಮೂರ್ತಿ ವಿಸರ್ಜನೆ ನೆರವೇರಿಸಿ ಭಾವೈಕ್ಯತೆಗೆ ಸಾಕ್ಷಿಯಾದರು.

ಗ್ರಾಮದ 4ನೇ ವಾರ್ಡಿನ ಹುನಗುಂದ ಲಾಲ್ ಸಾಬ್ ಮಸೀದಿಯ ಆವರಣದಲ್ಲಿ ಕಳೆದ ವರ್ಷದಂತೆ ಪ್ರಸಕ್ತ ವರ್ಷವೂ ಗಣೇಶ ಚತುರ್ಥಿಯನ್ನು ಭಕ್ತಿ, ಸೌಹಾರ್ದತೆಯಿಂದ ಆಚರಿಸಲು ಮುಸ್ಲಿಂ ಹಾಗೂ ಹಿಂದೂ ಯುವಕರು ಹಾಗೂ ಮುಖಂಡರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದರು. ಮೂರ್ತಿ ಪ್ರತಿಷ್ಠಾಪನೆ ಮಾಡಿ ಇಂದು ಐದನೇ ದಿನವಾಗಿದ್ದರಿಂದ ಶುಕ್ರವಾರ ಹಿಂದೂ – ಮುಸ್ಲಿಂ ಯುವಕರು ಕೇಸರಿ ಶಾಲು ಹಾಗೂ ಬಿಳಿ ಟೋಪಿ ಧರಿಸಿ ಗಣೇಶ ಮೂರ್ತಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣೇಶ ಮೂರ್ತಿ ಹೊತ್ತು ಘೋಷಣೆಗಳೊಂದಿಗೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಗಣೇಶ ಮೂರ್ತಿ ವಿಸರ್ಜನೆ ನೆರವೇರಿಸಿದ್ದು ಹನುಮಸಾಗರ ಗ್ರಾಮ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೇಂದ್ರ ಎಂಬುದು ಮತ್ತೊಮ್ಮೆ ಸಾಬೀತಾಯಿತು.

ಮೂರ್ತಿ ವಿಸರ್ಜನೆ ವೇಳೆ ಗ್ರಾಮದ ಪ್ರಮುಖರಾದ ರಿಯಾಜ್ ಖಾಜಿ, ಕಳಕಪ್ಪ ನಿರ್ವಾಣಿ, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ಹುಲ್ಲೂರು, ಕೃಷ್ಣಪ್ಪ ಬಂಡರಗಲ್ಲ, ಮುಕ್ತಂಸಾಬ ನಾಯಕ, ಹನುಮಂತ್ ಬಂಡರಗಲ್ಲ ಬಾಳುಸಾಬ, ಮುಜಾವರ ಮುದುಗಲ್, ನಾಗಪ್ಪ ಮಡಿವಾಳರ್ ಖಾಜಾ ಸಾಬ್ ಲಮನಿ ಮಾಬುಸಾಬ ದಿಂಡವಾಡ ಸೇರಿದಂತೆ ಹಿಂದೂ – ಮುಸ್ಲಿಂ ನೂರಾರು ಯುವಕರು ಹಾಗೂ ಹಿರಿಯರು ಭಾಗವಹಿಸಿದ್ದರು.