ಮಹಾಂತೇಶ ಚಕ್ರಸಾಲಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಗ್ರಾಮೀಣ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರ ಸುಸಜ್ಜಿತವಾದ ಕಾಲೇಜು ಕಟ್ಟಡ ಒದಗಿಸಿದೆ. ಚೆನ್ನಾಗಿ ವಿದ್ಯಾಭ್ಯಾಸ ಮಾಡುವ ಮೂಲಕ ಮಕ್ಕಳು ಉತ್ತಮ ಶಿಕ್ಷಣವಂತರಾಗಬೇಕು ಎಂದು ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಅವರು ಹೇಳಿದರು.
ಅವರು, ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, 2018-19 ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮ್ಯಾಕ್ರೋ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಸರಕಾರಿ ಪದವಿ ಪೂರ್ವ ಕಾಲೇಜು ಹೆಚ್ಚುವರಿ ಕೊಠಡಿ ಹಾಗೂ ಶೌಚಾಲಯ ಬ್ಲಾಕ್ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಇದೇವೇಳೆ ಕಾಲೇಜಿಗೆ ಅಗತ್ಯ ಡೆಸ್ಕ್’ಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಒದಗಿಸುವ ಕುರಿತು ಮನವಿ ಸ್ವೀಕರಿಸಿದ ಸಂಸದ ಸಂಗಣ್ಣ ಕರಡಿ ಅವರು, ಶುದ್ಧ ಕುಡಿಯುವ ನೀರಿನ ಘಟಕ ಕಲ್ಪಿಸುವುದಾಗಿ ಭರವಸೆ ನೀಡಿದರು. ಅದೇರೀತಿ ಶಾಸಕ ದೊಡ್ಡನಗೌಡ ಎಚ್. ಪಾಟೀಲ ಅವರು ಡೆಸ್ಕ್ ಸೇರಿದಂತೆ ಕಾಲೇಜಿಗೆ ಬೇಕಾಗುವ ಅಗತ್ಯ ಸೌಕರ್ಯಗಳನ್ನು ಪೂರೈಸುವುದಾಗಿ ಭರವಸೆ ನೀಡಿದರು. ಜೊತೆಗೆ ಹನುಮನಾಳ ಹೋಬಳಿ ಗ್ರಾಮದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ದೂರದ ಇಳಕಲ್, ಗಜೇಂದ್ರಗಡ, ಕುಷ್ಟಗಿ ಪಟ್ಟಣಕ್ಕೆ ಹೋಗಬೇಕಾಗಿದ್ದು, ಈ ಭಾಗಲ ಹೆಣ್ಣುಮಕ್ಕಳನ್ನು ಕಳುಹಿಸಲು ಫಾಲಕರು ಹಿಂದೇಟು ಹಾಕುತ್ತಿರುವುದರಿಂದ ಶಿಕ್ಷಣದಿಂದ ವಂಚಿತರಾಗುತಿದ್ದಾರೆ. ಹಾಗಾಗಿ ಹನುಮನಾಳದಲ್ಲಿ ಪದವಿ ಕಾಲೇಜು ಸ್ಥಾಪಿಸಲು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು.
ಮುಖಂಡರ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಸಂಸದರು ಹಾಗೂ ಶಾಸಕರು ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಮುಂದಿನದಿನಮಾನಗಳಲ್ಲಿ ಪದವಿ ಕಾಲೇಜು ಮಂಜೂರು ಮಾಡಿಸುವ ಭರವಸೆ ನೀಡಿದರು. ಅಲ್ಲದೇ ಹನುಮನಾಳದಿಂದ ಕೊಪ್ಪಳ ಜಿಲ್ಲಾ ಕೇಂದೊರಕ್ಕೆ ತೆರಳಲು ಬಸ್ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರು ಬೇಡಿಕೆ ಇಟ್ಟಾಗ ಇನ್ನೊಂದು ವಾರದಲ್ಲಿ ಹನುಮನಾಳದಿಂದ ನೆರವಾಗಿ ಕೊಪ್ಪಳಕ್ಕೆ ಬಸ್ ಸಂಚರಿಸಲಿದೆ ಎಂದು ಖಚಿತಪಡಿಸಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಮಹೇಶ, ಈರಣ್ಣ ಗಡಾದ, ಸೋಮಣ್ಣ ಈಂಗಳದಾಳ, ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರು ಸೇರಿದಂತೆ ಹನುಮನಾಳ ಗ್ರಾಮದ ಮುಖಂಡರು, ಜನಪ್ರತಿನಿಧಿಗಳು ಹಾಗೂ ಕಾಲೇಜು ಪ್ರಭಾರಿ ಪ್ರಾಂಶುಪಾಲ ಸಂಜಯ್ ಬಡಿಗೇರ, ಲೋಕೋಪಯೋಗಿ ಇಲಾಖೆ ಹಾಗೂ ಲ್ಯಾಂಡ್ ಆರ್ಮಿ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.